
ಅಂಡರ್ -19 ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಅಂಡರ್-19 ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 260 ರನ್ ಗುರಿ ಬೆನ್ನತ್ತಿದ ಭಾರತ 10 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಯಶ್ ದುಲ್ ನಾಯಕತ್ವದ ಭಾರತ ಅಂಡರ್-19 ತಂಡವು , ಅಫ್ಘಾನಿಸ್ತಾನ ತಂಡವನ್ನ 259 ರನ್‌ಗಳಿಗೆ ಕಟ್ಟಿ ಹಾಕಿತು. ಅಫ್ಘಾನಿಸ್ತಾನ ಪರ ನಾಯಕ ಸುಲಿಮನ್ ಸಫಿ 73 (86), ಹಾಗೂ ಇಜಾಜ್ ಅಹ್ಮದ್ ಅಹ್ಮದ್ಝೈ 68 ಎಸೆತಗಳಲ್ಲಿ 86 ರನ್‌ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 259ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಭಾರತ ಅಂಡರ್-19 ತಂಡವು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಓಪನರ್‌ಗಳಾದ ಹರ್ನೂರ್ ಸಿಂಗ್ ಮತ್ತು ಎ. ರಘುವಂಶಿ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ರು.
ಹರ್ನೂರ್ ಸಿಂಗ್ 74 ಎಸೆತಗಳಲ್ಲಿ 65 ರನ್ ಕಲೆಹಾಕಿದ್ರೆ, ಎ. ರಘುವಂಶಿ 47 ಎಸೆತಗಳಲ್ಲಿ 35 ರನ್ ಗಳಿಸಿ ಎದುರಾಳಿ ಬೌಲರ್ ನೂರ್ ಅಹ್ಮದ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಈತನ ಬೆನ್ನಲ್ಲೇ ಹರ್ನೂರ್ ಸಿಂಗ್ ಕೂಡ ಅದೇ ನೂರ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದಂತಹ ಶೈಕ್ ರಶೀದ್ ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. 6 ರನ್‌ಗೆ ರಶೀದ್ ಇನ್ನಿಂಗ್ಸ್ ಮುಗಿಸಿದ್ರು.
ಟಾಪ್ ಆರ್ಡರ್‌ನ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳು ಎಡಗೈ ಚೈನಾಮೆನ್ ಬೌಲರ್ ನೂರ್ ಅಹ್ಮದ್‌ಗೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದು ವಿಶೇಷ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಯಶ್ ದುಲ್ ಹಾಗೂ ನಿಶಾಂತ್ ಸಂದು ಹೆಚ್ಚು ಕ್ರೀಸ್‌ನಲ್ಲಿ ಉಳಿಯದ ಪರಿಣಾಮ ಗೆಲುವಿನ ಜವಾಬ್ದಾರಿ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಹೆಗಲೇರಿತು.
ರಾಜ್ ಬವ ಅಜೇಯ 43ರನ್ ಕೌಶಲ್ ತಾಂಬೆ ಅಜೇಯ 35ರನ್‌ಗಳ ನೆರವಿನಿಂದ ಭಾರತ ಅಂಡರ್ 19 ತಂಡವು 48.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತ ಗಳಿಸಿದ 262ರನ್‌ಗಳಲ್ಲಿ ಅಫ್ಘಾನಿಸ್ತಾನ 21 ರನ್ ಹೆಚ್ಚುವರಿ (ಎಕ್ಸ್‌ಟ್ರಾ) ನೀಡಿ ದುಬಾರಿಯಾಯಿತು.
ಈ ಗೆಲುವಿನೊಂದಿಗೆ ಭಾರತ ಅಂಡರ್-19 ತಂಡವು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದು ಗುರುವಾರ ಬಾಂಗ್ಲಾದೇಶ ಅಥವಾ ಶ್ರೀಲಂಕಾ ತಂಡವನ್ನ ಎದುರಿಸಲಿದೆ.