
ಭಾರತ ಅಂಡರ್-19 ತಂಡವು ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದೆ. ಗುರುವಾರ ದುಬೈನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಅಂಡರ್ -19 ತಂಡ 103ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಅಫ್ಘಾನಿಸ್ತಾನ ವಿರುದ್ಧ ಶತಕದ ಜೊತೆಯಾಟವಾಡಿದ್ದ ಓಪನಿಂಗ್ ಜೋಡಿ ಹರ್ನೂರ್ ಸಿಂಗ್ ಮತ್ತು ಎ. ರಘುವಂಶಿ 23ರನ್‌ಗೆ ಮೊದಲ ವಿಕೆಟ್ ಕೈ ಚೆಲ್ಲಿದರು. ನಂತರ ಬಂದ ನಿಶಾಂತ್ ಸಿಂಧು ಕೂಡ ಕೇವಲ 5 ರನ್‌ಗೆ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡ್ರು.
ಆದ್ರೆ ಅಜೇಯ 90 ರನ್ ಕಲೆಹಾಕಿದ ಶೇಖ್ ರಶೀದ್ ತಂಡದ ಮೊತ್ತವನ್ನ 200 ಗಡಿ ದಾಟಿಸುವಲ್ಲಿ ಯಶಸ್ವಿಯಾದ್ರು. ಭಾರತ ಅಂಡರ್-19 ತಂಡದ ನಾಯಕ ಯಶ್ ದುಲ್ 26ರನ್, ರಾಜ್ ಭವ 23 ರನ್ ಕೊಡುಗೆಯ ಮೂಲಕ ತಂಡದ ಮೊತ್ತ ಹೆಚ್ಚಿಸಿದ್ರು. ಕೊನೆಯಲ್ಲಿ ವಿಕ್ಕಿ ಓಸ್ವಾಲ್ 18 ಎಸೆತಗಳಲ್ಲಿ 28ರನ್ ಸಿಡಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ರು.
ಅಂತಿಮವಾಗಿ ಭಾರತ ಅಂಡರ್ 19 ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243ರನ್ ಕಲೆಹಾಕಿತು. ಬಾಂಗ್ಲಾದೇಶದ ಪರ ನಾಯಕ ರಾಕಿಬುಲ್ ಹಸನ್ ಮೂರು ವಿಕೆಟ್ ಪಡೆದು ಮಿಂಚಿದರು.
ಭಾರತ ನೀಡಿದ 244 ರನ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಭಾರತದ ಯುವ ವೇಗಿ ರವಿ ಕುಮಾರ್ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ರಾಜ್ ಬವ ಮತ್ತೋರ್ವ ಓಪನರ್ ಮಹಿಫಿಜುಲ್ ಇಸ್ಲಾಮ್‌ರನ್ನ (26) ಔಟ್ ಮಾಡಿ ಬಾಂಗ್ಲಾಕ್ಕೆ ಮತ್ತಷ್ಟು ಆಘಾತ ನೀಡಿದ್ರು.
ಮಧ್ಯಮ ಕ್ರಮಾಂಕದಲ್ಲಿ ಅರಿಫುಲ್ ಇಸ್ಲಾಮ್ 42 ರನ್ ಕಲೆಹಾಕಿ ಬಾಂಗ್ಲಾ ತಂಡಕ್ಕೆ ಕೊಂಚ ಆಧಾರವಾಗಿದ್ದು ಬಿಟ್ರೆ, ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಭಾರತದ ಯುವ ಪಡೆಯ ಪ್ರಬಲ ದಾಳಿಗೆ ನೆಲಕಚ್ಚಿದ ಬಾಂಗ್ಲಾದೇಶ 38.2 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನಗೊಂಡಿತು.
ಈ ಗೆಲುವಿನ ಮೂಲಕ 103 ರನ್‌ಗಳ ಬೃಹತ್ ಜಯ ಸಾಧಿಸಿದ ಭಾರತ ಅಂಡರ್-19 ತಂಡ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದೆ. ಭಾರತ ಪರ ರವಿ ಕುಮಾರ್, ರಾಜ್ ಬವ,ವಿಕ್ಕಿ ಓಸ್ವಾಲ್ ರಾಜವರ್ಧನ್ ಹಂಗರ್‌ರ್ಕೆರ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ. ನಿಶಾಂತ್ ಸಿಂಧು ಮತ್ತು ಕೌಶಾಲ್ ತಂಬೆ ತಲಾ 1 ವಿಕೆಟ್ ಪಡೆದು ಮಿಂಚಿದ್ದಾರೆ.
ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿದ ಶ್ರೀಲಂಕಾ ವಿರುದ್ಧ ಭಾರತ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.