ಚೆಂಡು ವಿರೂಪ: ಚಂಡಿಮಾಲ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?


ಸೇಂಟ್ ಲೂಸಿಯಾ, ಜೂನ್ 18: ಆಸ್ಟ್ರೇಲಿಯಾದ ಕ್ರಿಕೆಟಿಗರು ಚೆಂಡು ವಿರೂಪಗೊಳಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಅದೇ ರೀತಿಯ ಪ್ರಕರಣ ತೀವ್ರ ಚರ್ಚೆಗೀಡು ಮಾಡಿದೆ.
ಆಸ್ಟ್ರೇಲಿಯಾದಲ್ಲಿ ನಾಯಕ ಸ್ಟೀವ್ ಸ್ಮಿತ್ ಸೇರಿದಂತೆ ಮೂವರು ಈ ಆರೋಪದಡಿ ಶಿಕ್ಷೆಗೆ ಒಳಗಾಗಿದ್ದಾರೆ. ಇಲ್ಲಿಯೂ ಸಿಕ್ಕಿಬಿದ್ದಿರುವುದು ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ನಾಯಕ ಚಂಡಿಮಾಲ್ ಮತ್ತು ತಂಡದ ಇತರೆ ಆಟಗಾರರು ವಿಚಾರಣೆಗೆ ಒಳಗಾಗಲಿದ್ದಾರೆ.
ಆಸ್ಟ್ರೇಲಿಯಾದ ಆಟಗಾರರು ಉಪ್ಪು ಕಾಗದ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದನ್ನು ಕ್ಯಾಮೆರಾಮ್ಯಾನ್ ಒಬ್ಬ ಸೆರೆಹಿಡಿದಿದ್ದ. ಆದರೆ, ಶ್ರೀಲಂಕಾದ ಚಂಡಿಮಾಲ್ ಇಲ್ಲಿ ಸಿಕ್ಕಿಬೀಳಲು ಅವರ ತಂತ್ರವೇ ಕಾರಣ ಎನ್ನುವುದು ಬಹಿರಂಗವಾಗಿದೆ.
ಎರಡನೆಯ ದಿನದ ಸಂಜೆಯ ಆಟದ ವೇಳೆಗೆ ವಿಕೆಟ್‌ಗಳು ಬೀಳದೆ ಶ್ರೀಲಂಕಾ ಆಟಗಾರರು ಆಯಾಸಗೊಂಡಿದ್ದರು. ಶ್ರೀಲಂಕಾ ಆಟಗಾರರು ಚೆಂಡನ್ನು ನಿರ್ವಹಿಸಿದ ರೀತಿಯ ಕುರಿತು ಫೀಲ್ಡ್ ಅಂಪೈರ್‌ಗಳಾದ ಅಲೀಮ್ ದರ್ ಮತ್ತು ಇಯಾನ್ ಗೌಲ್ಡ್, ಟೆಲಿವಿಷನ್ ಅಂಪೈರ್ ರಿಚರ್ಡ್ ಕೆಟಲ್‌ಬರೊ ಅವರು ಕಳವಳ ವ್ಯಕ್ತಪಡಿಸಿದ್ದರು.
ಶ್ರೀಲಂಕಾ ಆಟಗಾರರ ಕುರಿತು ಅನುಮಾನಗೊಂಡ ಈ ಮೂವರೂ ತಮ್ಮ ಶಂಕೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರಸಾರದ ಹಕ್ಕು ಪಡೆದಿದ್ದ ಸಂಸ್ಥೆಯನ್ನು ವಿಡಿಯೋ ಫೂಟೇಜ್‌ಗಾಗಿ ಸಂಪರ್ಕಿಸಿದ್ದರು.
ಮರುದಿನ ಬೆಳಿಗ್ಗೆ ವಿಡಿಯೋ ವೀಕ್ಷಿಸಿದ ಅಂಪೈರ್‌ಗಳು ಚಂಡಿಮಾಲ್ ತಮ್ಮ ಜೇಬಿನಿಂದ ಏನನ್ನೂ ತೆಗೆದು ಬಾಯಿಯೊಳಗೆ ಹಾಕಿಕೊಂಡು, ಕೆಲವು ಸೆಕೆಂಡುಗಳ ಬಳಿಕ ಅದರ ಸಿಹಿಯನ್ನು ಚೆಂಡಿಗೆ ಸವರಿ ಬೌಲರ್ ಲಹಿರು ಕುಮಾರ ಅವರಿಗೆ ನೀಡಿದ್ದನ್ನು ಕಂಡಿದ್ದರು.
ಈ ವಿಡಿಯೋ ಆಧರಿಸಿ ಅಂಪೈರ್‌ಗಳು ಚೆಂಡು ವಿರೂಪದ ಆರೋಪ ಹೊರಿಸಿದ್ದಾರೆ. ಮರುದಿನ ಬೆಳಿಗ್ಗೆ ಬೇರೆ ಚೆಂಡಿನಲ್ಲಿ ಆಡಿಸುವ ನಿರ್ಧಾರವನ್ನು ವಿರೋಧಿಸಿ ಶ್ರೀಲಂಕಾ ಆಟಗಾರರು ಮೈದಾನಕ್ಕೆ ಇಳಿಯಲು ನಿರಾಕರಿಸಿದ್ದರು. ಆದರೆ, ಚೆಂಡನ್ನು ಬದಲಾಯಿಸಿದ್ದಲ್ಲದೆ, ವೆಸ್ಟ್ ಇಂಡೀಸ್ ತಂಡಕ್ಕೆ ಪೆನಾಲ್ಟಿಯಾಗಿ ಐದು ರನ್ ನೀಡಲಾಯಿತು.
ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ತಂಡದ ಮ್ಯಾನೇಜ್‌ಮೆಂಟ್ ಹಾಗೂ ಕೊಲಂಬೊದಲ್ಲಿನ ಶ್ರೀಲಂಕಾ ಕ್ರಿಕೆಟ್ ಮಂಡಳಿಯವರ ಜತೆ ಸುದೀರ್ಘ ಮಾತುಕತೆ ನಡೆಸಿದರು.
ಕೊನೆಗೆ ಶ್ರೀಲಂಕಾ ಆಟಗಾರರು 11.30ರ ಒಳಗೆ ಮೈದಾನಕ್ಕೆ ಇಳಿಯದೆ ಇದ್ದರೆ ದಂಡ ತೆರಬೇಕಾಗುತ್ತದೆ ಎಂದು ಶ್ರೀನಾಥ್ ಎಚ್ಚರಿಕೆ ನೀಡಿದ್ದರು. ಗಡುವು ಅಂತ್ಯಗೊಳ್ಳುವ ಕೆಲವೇ ಸಮಯಕ್ಕೆ ಮುನ್ನ ಲಂಕನ್ನರು ಮೈದಾನ ಪ್ರವೇಶಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications