
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತು ಕಂಡ ಉತ್ತಮ ಆಟಗಾರರಲ್ಲಿ ಒಬ್ಬರು. ಭಾರತಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಸದ್ಯ 41ನೇ ವಯಸ್ಸಿನಲ್ಲೂ ಯುವಕನಂತೆ ಫಿಟ್‌ನೆಸ್ ಹೊಂದಿರುವ ಧೋನಿ ತಮ್ಮ ಕೊನೆಯ ಐಪಿಎಲ್ ಆವೃತ್ತಿಯನ್ನು ಆಡಲು ಸಜ್ಜಾಗಿದ್ದಾರೆ.
ಧೋನಿ ಕಂಡರೆ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಅನ್ನೋದು ಗೊತ್ತೇ ಇದೆ. ಕೆಲವು ಅಭಿಮಾನಿಗಳು ಮಾತ್ರ ತಮ್ಮ ಅಭಿಮಾನವನ್ನು ವಿಶಿಷ್ಠವಾಗಿ ತೋರಿಸಿಕೊಳ್ಳುವುದನ್ನು ನೋಡಿದ್ದೇವೆ. ಈಗ ಕರ್ನಾಟಕದ ಧೋನಿ ಅಭಿಮಾನಿಯೊಬ್ಬ ತನ್ನ ಮದುವೆಯ ಕರೆಯೋಲೆಯಲ್ಲಿ ಧೋನಿಯ ಫೋಟೊವನ್ನು ಹಾಕಿಸಿಕೊಂಡಿದ್ದು, ಆ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾರ್ಚ್ 12ರಂದು ಇದೇ ಭಾನುವಾರ ಈ ಮದುವೆ ನಡೆಯಲಿದೆ. ಮದುವೆಯಾಗುತ್ತಿರುವ ಅಭಿಮಾನಿಯ ಹೆಸರು ಶಮಂತ್ ಕುಮಾರ್ ಪಿ.ಜಿ (ಶಮಂತ್) ಎಂದು ತಿಳಿದುಬಂದಿದೆ. ಮದುವೆಯಾಗುತ್ತಿರುವ ಹುಡುಗಿಯ ಹೆಸರು ಭವ್ಯಶ್ರೀ (ರಮ್ಯ). ಇದನ್ನು ಹೊರತುಪಡಿಸಿ ಯಾವುದೇ ಹೆಚ್ಚಿನ ವಿವರ ತಿಳಿದುಬಂದಿಲ್ಲ.
ಈ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಿ, ಧೋನಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಅಭಿಮಾನ ಇದೇ ಮೊದಲಲ್ಲ
ಎಂಎಸ್ ಧೋನಿಗೆ ಈ ರೀತಿಯ ಗೌರವ ಸಿಗುತ್ತಿರುವುದು ಇದೇ ಮೊದಲನೇಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಧೋನಿ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದಾರೆ. ತಮಿಳುನಾಡಿನ ಸಾಕಷ್ಟು ಅಭಿಮಾನಿಗಳು ಧೋನಿ ಫೋಟೊವನ್ನು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವುದನ್ನು ನೋಡಬಹುದಾಗಿದೆ.
2020ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬ ತನ್ನ ಮನೆಗೆ ಪೂರ್ತಿ ಅರಿಶಿಣದ ಬಣ್ಣವನ್ನು ಬಳಿದಿದ್ದಲ್ಲದೆ, ಮನೆಗೆ 'ಹೋಮ್ ಆಫ್ ಧೋನಿ ಫ್ಯಾನ್' ಎಂದು ಹೆಸರಿಟ್ಟುಕೊಂಡು ಅಭಿಮಾನ ತೋರಿಸಿದ್ದರು. ತಮಿಳುನಾಡಿನ ಅರಂಗೂರ್‌ನಲ್ಲಿರುವ ಗೋಪಿ ಕೃಷ್ಣನ್ ಮತ್ತು ಅವರ ಕುಟುಂಬ ಈ ರೀತಿಯ ಅಭಿಮಾನ ತೋರಿಸಿ ಸಾಕಷ್ಟು ಸುದ್ದಿಯಾಗಿದ್ದರು.

ಐಪಿಎಲ್‌ಗಾಗಿ ಸಜ್ಜಾಗುತ್ತಿರುವ ಧೋನಿ
ಎಂಎಸ್ ಧೋನಿ ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. 2023ರ ಐಪಿಎಲ್ ಬಳಿಕ ಧೋನಿ ನಿವೃತ್ತಿಯಾಗುವುದು ಖಚಿತವಾಗಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಮುಂದೆ ಆಡಿದ ಬಳಿಕ ಧೋನಿ ನಿವೃತ್ತಿಯಾಗಲು ಬಯಸಿದ್ದಾರೆ.
ತಮ್ಮ ನಿವೃತ್ತಿಯನ್ನು ಸ್ಮರಣೀಯವನ್ನಾಗಿಸಲು ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂಎಸ್ ಧೋನಿ. ಒಂದು ತಿಂಗಳು ಇರುವಂತೆಯೇ ಚೆನ್ನೈಗೆ ಆಗಮಿಸಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಧೋನಿಗೆ ವಿಶೇಷವಾಗಿ ಬೀಳ್ಕೊಡುಗೆ ನೀಡಲು ಅಭಿಮಾನಿಗಳು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.