
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನ ಗಲ್ಲಿ ಗಲ್ಲಿಯಲ್ಲಿ ಸ್ಕೂಟರ್‌ನಲ್ಲಿ ಸುತ್ತಾಡಿರುವ ವೀಡಿಯೋ ಸಖತ್ ವೈರಲ್ ಆಗಿದೆ.
ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಮುಂಬರುವ ಏಷ್ಯಾಕಪ್‌ನಲ್ಲಿ ಭಾಗಿಯಾಗಲಿದ್ದಾರೆ. ಏಷ್ಯಾಕಪ್ ಯುಎಇನಲ್ಲಿ ಆಗಸ್ಟ್ 27ರಂದು ಚಾಲನೆ ಸಿಗಲಿದ್ದು, ಅದಕ್ಕೂ ಮೊದಲು ಕೊಹ್ಲಿ ಸೇರಿದಂತೆ ಪ್ರಮುಖ ಟೀಂ ಇಂಡಿಯಾ ಆಟಗಾರರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದಾರೆ.
ದುಬೈ ವಿಮಾನ ಹತ್ತೋಕು ಮೊದಲು ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆಗೆ ಶನಿವಾರ ಜಾಹೀರಾತುವೊಂದರ ಶೂಟಿಂಗ್‌ಗೆ ಸ್ಕೂಟರ್‌ನಲ್ಲಿ ತೆರಳಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ತಂದಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಹಲವು ಕಾರುಗಳನನ್ನ ಹೊಂದಿದ್ದರೂ, ಈ ಸ್ಟಾರ್ ದಂಪತಿ ಸ್ಕೂಟರ್‌ನಲ್ಲಿ ನಗರ ಸುತ್ತಿರೋದು ನಿಜಕ್ಕೂ ಆಶ್ಚರ್ಯ ಎಡೆಮಾಡಿರುವುದರ ಜೊತೆಗೆ ಇಷ್ಟು ಸರಳವಾಗಿ ಸಾಮಾನ್ಯರಂತೆ ಸುತ್ತಾಡಿರುವುದು ಅಭಿಮಾನಿಗಳಿಗೆ ಸಾಕಷ್ಟು ಖುಷಿ ತಂದಿದೆ.
ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಷ್ಟು ಸುಲಭವಾಗಿ ಯಾರಿಗೂ ಗುರುತು ಸಿಗದಂತೆ ಸ್ಕೂಟರ್‌ನಲ್ಲಿ ತೆರಳಿದ್ದಾರೆ. ಆದ್ರೆ ಅಭಿಮಾನಿಗಳು ಕೇಳಬೇಕಾ? ಎಂತಹ ವೇಷ ಧರಿಸಿದ್ರು ತನ್ನ ಫೇವರಿಟ್ ಆಟಗಾರ ಕೊಹ್ಲಿಯನ್ನ ಪತ್ತೆ ಹಿಡಿದು ಆತನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ್ರು. ಗುಂಡಿಬಿದ್ದ ರಸ್ತೆಗಳಲ್ಲಿ ಸರಾಗವಾಗಿ ಸ್ಕೂಟರ್ ಓಡಿಸಿದ ವಿರಾಟ್ ಕೊಹ್ಲಿ ಅಭಿಮಾನಿಗಳು ಗುರುತು ಹಿಡಿದ ಪರಿಣಾಮ ಆದಷ್ಟು ಬೇಗ ಮನೆ ತಲುಪುವ ಭರದಲ್ಲಿದ್ದಂತೆ ಕಾಣುತ್ತಿತ್ತು.
ಸ್ಕೂಟರ್ ಓಡಿಸುವ ವೇಳೆ ತಮ್ಮನ್ನು ಮತ್ತೊಬ್ಬ ಬೈಕ್ ಸವಾರ ಗುರುತು ಹಿಡಿಯುತ್ತಿದ್ದಂತೆ, ಸ್ವಲ್ಪ ವಿಚಲಿತರಾದಂತೆ ಕಾಣುತ್ತಿದ್ದ ಸ್ಟಾರ್ ದಂಪತಿ ಅಲ್ಲಿಂದ ಕಾಲ್ಕಿಳಲು ಸಾಕಷ್ಟು ಪ್ರಯತ್ನ ನಡೆಸಿದ್ರು. ವಿರುಷ್ಕಾ ದಂಪತಿಯನ್ನ ಬೆನ್ನತ್ತಿ ವೀಡಿಯೋ ಮಾಡುತ್ತಿದ್ದ ಅಭಿಮಾನಿಗಳ ಕಾಟಕ್ಕೆ ಬೇಸತ್ತ ಅನುಷ್ಕಾ ಶರ್ಮಾ, ಏಕೆ ಈ ರೀತಿ ಮಾಡುತ್ತಿದ್ದೀರಿ? ಎಂದು ಸನ್ನೆ ಮೂಲಕ ಕೇಳಿರುವುದು ಸಹ ವೀಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.