
ತವರಿನಲ್ಲಿ ವೇಗವಾಗಿ 5000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್
ವಿರಾಟ್ ಕೊಹ್ಲಿ ತವರಿನ ಅಂಗಳದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ 5000ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 12,000ಕ್ಕೂ ಅಧಿಕ ಏಕದಿನ ರನ್‌ಗಳ ಒಡೆಯ ವಿರಾಟ್ ತವರಿನಲ್ಲಿ ಕೇವಲ 96 ಇನ್ನಿಂಗ್ಸ್‌ನಲ್ಲಿ 5000ರನ್ ಕಲೆಹಾಕಿದ್ದಾರೆ.
ಆದ್ರೆ ಇದೇ ಮೈಲಿಗಲ್ಲು ತಲುಪಲು ಸಚಿನ್ ತೆಂಡೂಲ್ಕರ್ 121 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ 130 ಇನ್ನಿಂಗ್ಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 138ನೇ ಇನ್ನಿಂಗ್ಸ್‌ನಲ್ಲಿ 5000 ರನ್ ಸಿಡಿಸಿದ್ದಾರೆ.

ತವರಿನಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 48.11ರ ಸರಾಸರಿಯಲ್ಲಿ 6,976 ರನ್ ಗಳಿಸಿದ್ದಾರೆ. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 39.71 ಸರಾಸರಿಯಲ್ಲಿ 5521 ರನ್‌ಗಳೊಂದಿಗೆ ಮತ್ತು ಕಾಲಿಸ್ (ದಕ್ಷಿಣ ಆಫ್ರಿಕಾ) 45.89 ರೊಂದಿಗೆ 5186 ಕ್ಕೆ ಕಲೆಹಾಕಿದ್ದಾರೆ.
ಆದ್ರೆ ಬ್ಯಾಟಿಂಗ್ ಸರಾಸರಿ ವಿಚಾರದಲ್ಲಿ ವಿರಾಟ್ ಕೊಹ್ಲಿ (60.17) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತವರು ನೆಲದಲ್ಲಿ ಅತಿವೇಗವಾಗಿ 5,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.ವಿ ರಾಟ್ ಕೊಹ್ಲಿ ತವರು ನೆಲದಲ್ಲಿ 99 ಪಂದ್ಯಗಳಲ್ಲಿ 5002 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 25 ಅರ್ಧಶತಕಗಳು ಸೇರಿವೆ.

ಯುಜವೇಂದ್ರ ಚಹಾಲ್ 100 ವಿಕೆಟ್‌ನ ಪಡೆದ ಸಾಧನೆ
ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಯುಜವೇಂದ್ರ ಚಹಾಲ್ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುಜವೇಂದ್ರ ಚಹಹಾ ಏಕದಿನ ಕ್ರಿಕೆಟ್ ಮಾದರಿಯಲ್ಲಿ 100ನೇ ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡಿಸ್ ತಂಡದ ಉಪ ನಾಯಕ ನಿಕೋಲಸ್ ಪೂರನ್ ವಿಕೆಟ್ ಕಬಳಿಸುವ ಮೂಲಕ ಚಾಹಲ್ ಈ ಮೈಲಿಗಲ್ಲು ತಲುಪಿದರು.
ಈ ಮೂಲಕ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 100 ವಿಕೆಟ್ ಕಬಳಿಸಿದ ಭಾರತದ 5ನೇ ಬೌಲರ್ ಎನಿಸಿದರು. ಇನ್ನು ಸ್ಪಿನ್ನರ್‌ಗಳ ಪಟ್ಟಿಯಲ್ಲಿ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿದ್ದಾರೆ. ಮೊದಲನೇ ಸ್ಥಾನದಲ್ಲಿ ವೇಗಿ ಮೊಹಮ್ಮದ್ ಶಮಿ ಇದ್ದರೆ, ಜಸ್ಪ್ರೀತ್ ಬೂಮ್ರಾ 2ನೇ ಸ್ಥಾನದಲ್ಲಿ, ಕುಲ್ದೀಪ್ ಯಾದವ್ 3 ಹಾಗೂ ಇರ್ಫಾನ್ ಪಠಾಣ್ 4ನೇ ಸ್ಥಾನದಲ್ಲಿದ್ದಾರೆ.

1000ನೇ ಏಕದಿನ ಪಂದ್ಯ ಗೆದ್ದು ಬೀಗಿದ ಭಾರತ
ವೆಸ್ಟ್ ಇಂಡೀಸ್ ವಿರುದ್ಧದ ಐತಿಹಾಸಿಕ 1000 ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಆಯಿತು. ಜೇಸನ್ ಹೋಲ್ಡರ್ (71 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 57) ಅರ್ಧಶತಕ ಬಾರಿಸಿದರೆ ಉಳಿದ ಬ್ಯಾಟ್ಸ್ ಮನ್ ಗಳು ವಿಫಲರಾದರು. ಸ್ಪಿನ್ನರ್ ಯುಜುವೇಂದ್ರ ಚಹಾಲ್ (4/49) ನಾಲ್ಕು ವಿಕೆಟ್‌ಗಳನ್ನು ಪಡೆದರು, ವಾಷಿಂಗ್ಟನ್ ಸುಂದರ್ (3/30) ಮತ್ತು ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದರು. ಇವರೊಂದಿಗೆ ಸಿರಾಜ್ ಕೂಡ ಒಂದು ವಿಕೆಟ್ ಪಡೆದರು.
ಭಾರತೀಯ ಬೌಲರ್ ಗಳ ದಾಳಿಗೆ ಒಂದು ಹಂತದಲ್ಲಿ 79 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ವಿಂಡೀಸ್ ಕನಿಷ್ಠ 100 ರನ್ ಗಳಿಸಲಿದೆಯೇ? ಅನ್ನಿಸಿತು. ಆದರೆ ಹೋಲ್ಡರ್ ತಂಡದ ಮರ್ಯಾದೆ ಕಾಪಾಡಿದರು.
ನಂತರ ಟೀಂ ಇಂಡಿಯಾ 28 ಓವರ್‌ಗಳಲ್ಲಿ 4 ವಿಕೆಟ್‌ಗೆ 178 ರನ್ ಗಳಿಸಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮಾ (60), ಇಶಾನ್ ಕಿಶನ್ (28), ಸೂರ್ಯಕುಮಾರ್ ಯಾದವ್ (ಔಟಾಗದೆ 34) ಮತ್ತು ದೀಪಕ್ ಹೂಡಾ (ಅಜೇಯ 26) ರನ್ ಸೇರಿಸಿದರು. ವೆಸ್ಟ್ ಇಂಡೀಸ್ ಬೌಲರ್‌ಗಳಾದ ಅಲ್ಜಾರಿ ಜೋಸೆಫ್ ಎರಡು ವಿಕೆಟ್ ಪಡೆದರೆ, ಅಕಿಲಾ ಹೊಸೈನ್ ಒಂದು ವಿಕೆಟ್ ಪಡೆದರು. ಆದ್ರೆ ಭಾರತ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ (8) ಹಾಗೂ ರಿಷಬ್ ಪಂತ್ (11) ಮತ್ತೊಮ್ಮೆ ನಿರಾಸೆ ಮೂಡಿಸಿದರು.


Click it and Unblock the Notifications












