ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ಮೈಲಿಗಲ್ಲು, ದಾಖಲೆಗಳನ್ನು ಸಾಧಿಸುತ್ತಲೇ ಇದ್ದಾರೆ. ಕೊಹ್ಲಿ ಬಾರಿಸುವ ಪ್ರತಿ ರನ್ ಕೂಡ ಈಗ ದಾಖಲೆಯ ಪುಟ ಸೇರುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ನೇ ಪಂದ್ಯವಾಡುತ್ತಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಿಟ್ಟಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಪ್ರಿಕಾದ ದಿಗ್ಗಜ ಆಟಗಾರ ಜಾಕ್ ಕ್ಯಾಲಿಸ್ ಅವರನ್ನು ಹಿಂದಿಕ್ಕಿದ್ದು ಈ ಪಟ್ಟಿಯಲ್ಲಿ ಕೊಹ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ನರ್‌ಗಳಿಸಿದ ಆಟಗಾರರ ಎಲೈಟ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಆಟಗಾರರೊಂದಿಗೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯದಲ್ಲಿ ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 87 ರನ್‌ಗಳನ್ನು ಗಳಿಸಿದ್ದು ಎರಡನೇ ದಿನ ಶತಕ ಪೂರ್ಣಗೊಳಿಸಿವ ನಿರೀಕ್ಷೆಯಲ್ಲಿದ್ದಾರೆ. ಇದು ಕೊಹ್ಲಿಯ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆಯಾಗಿ 76ನೇ ಅಂತಾರಾಷ್ಟ್ರೀಯ ಶತಕವಾಗಿರಲಿದೆ.
ಪ್ರಸ್ತಿತ ವಿರಾಟ್ ಕೊಹ್ಲಿ 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 53.67ರ ಸರಾಸರಿಯಲ್ಲಿ 25,548 ರನ್‌ಗಳನ್ನು ಗಳಿಸಿದ್ದಾರೆ. 559 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು 75 ಶತಕಗಳು ಮತ್ತು 132 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 254 ಕೊಹ್ಲಿಯ ಗರಿಷ್ಠ ಸ್ಕೋರ್. ಈ ಮೂಲಕ ವಿರಾಟ್ ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕ್ಯಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಜಾಕ್ ಕ್ಯಾಲೀಸ್ 519 ಪಂದ್ಯಗಳಲ್ಲಿ 62 ಶತಕ ಮತ್ತು 149 ಅರ್ಧಶತಕಗಳೊಂದಿಗೆ 25,534 ರನ್ ಗಳಿಸಿ ದಾಖಲೆ ಹೊಂದಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿಗಿಂತ ಮೇಲಿನ ಸ್ಥಾನದಲ್ಲಿ ನಾಲ್ವರು ಕ್ರಿಕೆಟಿಗರು ಮಾತ್ರವೇ ಇದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ 652 ಪಂದ್ಯಗಳಲ್ಲಿ 25,957 ರನ್ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 560 ಪಂದ್ಯಗಳಲ್ಲಿ 27,483 ರನ್‌ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದವರೇ ಆದ ಕುಮಾರ ಸಂಗಕ್ಕಾರ 594 ಪಂದ್ಯಗಳಲ್ಲಿ 28,016 ರನ್ ಗಳಿಸಿ 2ನೇ ಸ್ಥಾನವನ್ನು ಹೊಂದಿದ್ದು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 664 ಪಂದ್ಯಗಳಲ್ಲಿ 34,357 ರನ್‌ಗಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
111 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 49.38ರ ಸರಾಸರಿಯಲ್ಲಿ 8642 ರನ್ ಗಳಿಸಿದ್ದಾರೆ. ಈವರೆಗೆ 28 ಶತಕ ಮತ್ತು 30 ಅರ್ಧಶತಕಗಳನ್ನು ಈ ಸುದೀರ್ಘ ಮಾದರಿಗಲ್ಲಿ ಗಳಿಸಿದ್ದು 254* ಅವರ ಗರಿಷ್ಠ ಸ್ಕೋರ್. ಟೆಸ್ಟ್ ಮಾದರಿಯಲ್ಲಿ ಭಾರತದ ಪರವಾಘಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಇನ್ನು 274 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 57.32 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು 12,898 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಕೊಹ್ಲಿ 46 ಶತಕ ಮತ್ತು 65 ಅರ್ಧ ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು ಒಟ್ಟಾರೆಯಾಗಿ ಅವರು ಏಕದಿನ ಮಾದರಿಯಲ್ಲಿ ಕ್ರಿಕೆಟ್‌ನಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಭಾರತದ ಅನುಭವಿ ಬ್ಯಾಟರ್ ಟಿ20 ಮಾದರಿಯಲ್ಲಿಯೂ ಅದ್ಬುತ ದಾಖಳೆ ಹೊಂದಿದ್ದು ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಹೊಂದಿದ್ದಾರೆ. 115 ಪಂದ್ಯಗಳಲ್ಲಿ ಕೊಹ್ಲಿ 52.73 ಸರಾಸರಿಯಲ್ಲಿ 4,008 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದು ಅಜೇಯ 122 ರನ್ ಚುಟುಕು ಮಾದರಿಯಲ್ಲಿ ಅವರ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.