ಇನ್‌ಸ್ಟಾಗ್ರಾಮ್‌ನಿಂದ ಕಿಂಗ್ ಕೊಹ್ಲಿಗೆ ಕೋಟಿ ಕೋಟಿ ವರಮಾನ!

ಬೆಂಗಳೂರು, ಜುಲೈ 24: ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಅಂಗಣದಲ್ಲಿ ಮಾತ್ರವೇ ಅಲ್ಲ ಹಣ ಗಳಿಕೆಯಲ್ಲೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್ ಮೂಲಕ ಹಣ ಸಂಪಾದಿಸುತ್ತಿರುವ ಟಾಪ್ 10 ಕ್ರೀಡಾಪಟುಗಳ ಪೈಕಿ ಕಿಂಗ್ ಕೊಹ್ಲಿ ಏಕೈಕ ಭಾರತೀಯನಾಗಿ ಹಾಗೂ ಏಕಮಾತ್ರ ಕ್ರಿಕೆಟಿಗನಾಗಿಯೂ ಗುರುತಿಸಿಕೊಂಡಿದ್ದಾರೆ.
ಜನಪ್ರಿಯ ಸೋಷಿಯಲ್ ಮೀಡಿಯಾ ವೇದಿಕೆಯಾಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ, ವಿವಿಧ ಬ್ರ್ಯಾಂಡ್‌ಗಳ ಪ್ರಚಾರ ಸಲುವಾಗಿ ಪ್ರಕಟಿಸುವ ಒಂದೊಂದು ಫೋಟೊಗಳಿಗೆ ಕೋಡಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಅಂದಹಾಗೆ 10 ಅಗ್ರಮಾನ್ಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.
ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ತಮ್ಮ ಒಂದು ಫೋಟೊಗೆ ಬರೋಬ್ಬರಿ 6.74 ಕೋಟಿ ರೂ. ಸಂಭಾವನೆ ಸ್ವೀಕರಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಬ್ರೆಜಿಲ್‌ನ ತಾರೆ ನೆಯ್ಮಾರ್ ಇದ್ದು, ಮೂರನೇ ಸ್ಥಾನದಲ್ಲಿ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಇದ್ದಾರೆ. ಈ ಇಬ್ಬರೂ ಆಟಗಾರರು ಕ್ರಮವಾಗಿ 4.98 ಮತ್ತು 4.47 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಒಟ್ಟಾರೆ ಟಾಪ್ 3 ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜರ ಪ್ರಬಲ್ಯವಿದೆ.
ಇನ್ನು ಅಗ್ರ 10 ಕ್ರೀಡಾಪಟುಗಳಲ್ಲಿ 8 ಮಂದಿ ಫುಟ್ಬಾಲ್ ಆಟಗಾರರೇ ಇದ್ದು, ಕೊಹ್ಲಿ ಏಕಮಾತ್ರ ಕ್ರಿಕೆಟಿಗನಾಗಿ 9ನೇ ಸ್ಥಾನದಲ್ಲಿದ್ದರೆ, ಏಕಮಾತ್ರ ಬಾಸ್ಕೆಟ್‌ಬಾಲ್ ಆಟಗಾರನಾಗಿ ಲೆಬರಾನ್ ಜೇಮ್ಸ್ (1.88 ಕೋಟಿ ರೂ.) 5ನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 36 ದಶಲಕ್ಷ ಫಾಲೋವರ್ಸ್ ಇದ್ದು, ಈ ಜನಪ್ರಿಯತೆಯೇ ಅವರ ಬ್ರ್ಯಾಂಡ್ ದರವನ್ನು ಹೆಚ್ಚುವಂತೆ ಮಾಡಿದೆ. ಇನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಂತೂ ಕೊಹ್ಲಿ 100 ದಶಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.
ಕೊಹ್ಲಿ ಗಳಿಸುತ್ತಿರುವುದಾದರೂ ಎಷ್ಟು?
ಹೈಪರ್ ಎಚ್‌ಕ್ಯೂ ಒದಗಿಸಿರುವ ದತ್ತಾಂಶಗಳ ವರದಿ ಪ್ರಕಾರ ವಿರಾಟ್ ಕೊಹ್ಲಿ, ತಮ್ಮ ಒಂದು ಫೋಟೊಗೆ 1.35 ಕೋಡಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದಹಾಗೆ ಇನ್‌ಸ್ಟಾಗ್ರಾಮ್ ಮೂಲಕ ಹಣ ಗಳಿಸುತ್ತಿರುವವರ ಪೈಕಿ ಬೇರಾವ ಕ್ರಿಕೆಟಿಗರೂ ಕೊಹ್ಲಿಗೆ ಸಮೀಪವೂ ಇಲ್ಲ. ಮುಂದಿನ ಎರಡು ವರ್ಷಗಳಲ್ಲಿ 30 ವರ್ಷದ ಟೀಮ್ ಇಂಡಿಯಾ ನಾಯಕ ಈ ಪಟ್ಟಿಯಲ್ಲಿ ಅಗ್ರಸ್ಥಾನಬಕ್ಕೇರಿದರೂ ಅಚ್ಚರಿ ಪಡಬೇಕಿಲ್ಲ. ಅಂದಹಾಗೆ ಕೊಹ್ಲಿ ಅವರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಿಂದ ಆದಾಯ ಗಳಿಸುವ ಪಟ್ಟಿಯಲ್ಲಿ ರೊನಾಲ್ಡೊಗೆ ಕೊಹ್ಲಿ ಸಡ್ಡು ಹೊಡೆಯುವ ಅವಕಾಶ ಹೊಂದಿದ್ದಾರೆ.
ಇನ್‌ಸ್ಟಾಗ್ರಾಮ್ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ 5 ಕ್ರೀಡಾಪಟುಗಳ ಪಟ್ಟಿ

ಕ್ರಿಸ್ಟಿಯಾನೊ ರೊನಾಲ್ಡೊ (ಫುಟ್ಬಾಲ್)
ಕ್ಲಬ್ ತಂಡ: ಯುವೆಂಟಸ್
ದೇಶ ಪೋರ್ಚುಗಲ್
ಇನ್‌ಸ್ಟಾಗ್ರಾಮ್ ಸಂಭಾವನೆ: 6.74 ಕೋಟಿ ರೂ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್: 173 ದಶಲಕ್ಷ

ನೆಯ್ಮಾರ್ (ಫುಟ್ಬಾಲ್)
ಕ್ಲಬ್ ತಂಡ: ಪ್ಯಾರಿಸ್ ಸೇಂಟ್ ಜರ್ಮನ್
ದೇಶ: ಬ್ರೆಜಿಲ್
ಇನ್‌ಸ್ಟಾಗ್ರಾಮ್ ಸಂಭಾವನೆ: 4.98 ಕೋಟಿ ರೂ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್: 121 ದಶಲಕ್ಷ

ಲಿಯೋನೆಲ್ ಮೆಸ್ಸಿ (ಫುಟ್ಬಾಲ್)
ಕ್ಲಬ್ ತಂಡ: ಎಫ್‌ಸಿ ಬಾರ್ಸಿಲೋನಾ
ದೇಶ: ಅರ್ಜೆಂಟೀನಾ
ಇನ್‌ಸ್ಟಾಗ್ರಾಮ್ ಸಂಭಾವನೆ: 4.47 ಕೋಟಿ ರೂ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್: 123 ದಶಲಕ್ಷ

ಡೇವಿಡ್ ಬೆಕ್ಹಾಮ್ (ಫುಟ್ಬಾಲ್)
ಕ್ಲಬ್ ತಂಡ: ಮ್ಯಾಂಚೆಸ್ಟರ್ ಯುನೈಟೆಡ್ (ಮಾಜಿ ಆಟಗಾರ)
ದೇಶ: ಇಂಗ್ಲೆಂಡ್
ಇನ್‌ಸ್ಟಾಗ್ರಾಮ್ ಸಂಭಾವನೆ: 2.46 ಕೋಟಿ ರೂ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್: 57 ದಶಲಕ್ಷ

ಲೆಬರಾನ್ ಜೇಮ್ಸ್ (ಬಾಸ್ಕೆಟ್‌ಬಾಲ್)
ಕ್ಲಬ್: ಲಾಸ್ ಏಂಜಲೀಸ್ ಲ್ಯಾಕರ್ಸ್
ದೇಶ: ಅಮೆರಿಕ
ಇನ್‌ಸ್ಟಾಗ್ರಾಮ್ ಸಂಭಾವನೆ: 1.88 ಕೋಟಿ ರೂ
ಇನ್‌ಸ್ಟಾಗ್ರಾಮ್ ಫಾಲೋವರ್ಸ್: 50 ದಶಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications