
ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕವೇ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಅವರ ವಿಶಿಷ್ಠ ಬೌಲಿಂಗ್ ಆಕ್ಷನ್ ಚೆಂಡು ಹೆಚ್ಚು ಸ್ವಿಂಗ್ ಆಗಲು ಸಹಾಯ ಮಾಡುತ್ತದೆ. ಇದ್ರಿಂದಲೇ ಬುಮ್ರಾ ಯಾವುದೇ ಪಿಚ್‌ನಲ್ಲೂ ಬೇಕಾದ್ರೂ ವಿಕೆಟ್ ಬೇಟೆಯಾಡುವ ಸಾಮರ್ಥ್ಯ ಹೊಂದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಗಾಯಾಳುವಾಗಿ ದ್ವಿತೀಯ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ವೇಗಿ ಇಶಾಂತ್ ಶರ್ಮಾ ಜೊತೆಗೆ ಕುಳಿತುಕೊಂಡಿದ್ದ ಕೊಹ್ಲಿ ಜಸ್ಪ್ರೀತ್ ಬುಮ್ರಾರ ಬೌಲಿಂಗ್ ಶೈಲಿಯನ್ನ ಅಣಕಿಸಿದ್ದಾರೆ. ಅವರು ಬೌಲಿಂಗ್ ಮಾಡುವ ವೇಳೆ ಮಾಡು ಆಕ್ಷನ್ ಜೊತೆಗೆ ಫೀಲ್ಡ್ ಸೆಟ್ ಮಾಡುವ ರೀತಿಯ ಕುರಿತಾಗಿ ಬುಮ್ರಾರನ್ನ ಕೊಹ್ಲಿ ಆಡಿಕೊಂಡಿದ್ದಾರೆ.
ವೀಡಿಯೋದಲ್ಲಿ ಬುಮ್ರಾ ಚೆಂಡನ್ನು ಎರಡೂ ಕಡೆ ಚಲಿಸುವಂತೆ ಹೇಗೆ ಮಾಡುತ್ತಾರೆ ಎಂಬುದನ್ನು ಕೊಹ್ಲಿ ತೋರಿಸುತ್ತಿದ್ದರು. ಆದ್ರೆ ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಕೊಹ್ಲಿ ಸ್ವಲ್ಪ ತಮಾಷೆಯಿಂದ ಅಣಕಿಸುವಂತಿತ್ತು. ಕೊಹ್ಲಿಯ ಈ ಚೇಷ್ಠೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮೇಲಿನ ಬೆನ್ನಿನ ಮೂಳೆಯ ಸೆಳೆತದಿಂದಾಗಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು ಕೇಪ್ ಟೌನ್‌ನಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್‌ಗೆ ಸಿದ್ಧರಾಗುವ ನಿರೀಕ್ಷೆಯಿದೆ.
ಇದರ ನಡುವೆ ವಾಂಡರರ್ಸ್ ಪಿಚ್ ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ ದಾಳಿಗೆ ಟೀಮ್ ಇಂಡಿಯಾ 202ರನ್‌ಗಳಿಗೆ ನೆಲಕಚ್ಚಿದೆ. ಕೆ.ಎಲ್ ರಾಹುಲ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸುತ್ತಿದ್ದು, ಏಕಾಂಗಿಯಾಗಿ ಅರ್ಧಶತಕ ದಾಖಲಿಸಿದ್ರು. ಆಲ್‌ರೌಂಡರ್ ಅಶ್ವಿನ್ 50 ಎಸೆತಗಳಲ್ಲಿ 46 ರನ್ ಕಲೆಹಾಕಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 202ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿರುವ ಭಾರತಕ್ಕೆ, ಕೊಹ್ಲಿ ಅನುಪಸ್ಥಿತಿ ಕಾಡುತ್ತಿದ್ದ ಬೆನ್ನಲ್ಲೇ ಯುವ ವೇಗಿ ಮೊಹಮ್ಮದ್ ಸಿರಾಜ್ ಗಾಯಗೊಂಡು ಹೊರನಡೆದಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಪ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿದೆ. ನಾಯಕ ಡೀನ್ ಎಲ್ಗರ್ ಅಜೇಯ 11 ರನ್ ಕಲೆಹಾಕಿದ್ದು, ಕೀಗನ್ ಪೀಟರ್ಸನ್ ಅಜೇಯ 14ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತದ 202ರನ್ ಬೆನ್ನತ್ತಲು ಇನ್ನೂ 167ರನ್ ಬಾಕಿ ಉಳಿದಿದೆ.