
ಹೊಸದಾಗಿ ಆಯ್ಕೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ, 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಭಾಗವಹಿಸುವುದು, ಬಿಡುವುದನ್ನ ಬಿಸಿಸಿಐ ಏಕಾಂಗಿಯಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ 2023ಕ್ಕೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಾಗಲಿ ಅಥವಾ ಯಾವುದೇ ಪಾಕಿಸ್ತಾನ ಸಂಬಂಧಿತ ಯಾವುದೇ ನಿರ್ಧಾರವನ್ನು ಸರ್ಕಾರವು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಹೇಳಿದ ಬಳಿಕ ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದು, ಭಾರತ ಪ್ರವಾಸ ಕೈಗೊಳ್ಳಲಿದೆಯೇ ಅಥವಾ ಇಲ್ಲವೇ ಎಂಬುದನ್ನ ತಿಳಿಸಿದ್ದಾರೆ.
'' ಅದು ಕೇವಲ ಬಿಸಿಸಿಐನ ನಿರ್ಧಾರವಾಗಿಲ್ಲ. ನಮ್ಮ ತಂಡವು ಎಲ್ಲಿ ಹೋಗಬೇಕು ಎಂಬುದನ್ನ ಹೇಳಲು ಸಾಧ್ಯವಿಲ್ಲ. ನಾವು ಬೇರೆ ದೇಶಕ್ಕೆ ಹೋಗುವುದಾಗಲಿ ಅಥವಾ ಬೇರೆ ದೇಶದ ತಂಡವು ಇಲ್ಲಿಗೆ ಬರುವುದಾಗಲಿ ನಮಗೆ ಸರ್ಕಾರದಿಂದ ಕ್ಲಿಯರೆನ್ಸ್ ಇರಬೇಕು. ಒಮ್ಮೆ ನಮಗೆ ಸರ್ಕಾರದಿಂದ ಕ್ಲಿಯರೆಕ್ಸ್ ಸಿಕ್ಕ ಬಳಿಕವಷ್ಟೇ ನಾವು ತೆರಳುತ್ತೇವೆ. ನಾವು ನಮ್ಮಷ್ಟಕ್ಕೆ ನಾವೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ನಾವು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತರಾಗಿದ್ದೇವೆ'' ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ರೋಜರ್ ಬಿನ್ನಿ ಗುರುವಾರ ತಿಳಿಸಿದ್ದಾರೆ.
ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವು ಆತಿಥ್ಯ ವಹಿಸಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಷಾ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ, ತಟಸ್ಥ ಸ್ಥಳದಲ್ಲಿ ಟೂರ್ನಮೆಂಟ್ ನಡೆಯಲಿದೆ ಎಂದು ಹೇಳಿದ್ದರು.
ಶಾ ಹೇಳಿಕೆ ಹೊರಬೀಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತುರ್ತು ಸಭೆಗೆ ಮನವಿ ಮಾಡಿದೆ. ಜೊತೆಗೆ ಟೀಂ ಇಂಡಿಯಾ ನಮ್ಮ ದೇಶಕ್ಕೆ ಬರದಿದ್ರೆ, ನಾವು ಭಾರತದಲ್ಲಿ ನಡೆಯಲಿರುವ 2023ರ ಏಕದಿನ ಏಷ್ಯಾಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಟೀಂ ಇಂಡಿಯಾ ಕೊನೆಯ ಬಾರಿಗೆ 2008ರಲ್ಲ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, 2013ರಿಂದ ಉಭಯ ರಾಷ್ಟ್ರಗಳು ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿಲ್ಲ.