
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನ ನೆಲದಲ್ಲಿ ಸರಣಿಯನ್ನಾಡಲು ನಿರಾಕರಿಸಿದ ಬಳಿಕ ವೆಸ್ಟ್ ಇಂಡೀಸ್ ತಂಡ ಇದೀಗ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಬಂದಿಳಿದಿದೆ. ಭಾರೀ ಭದ್ರತೆಯೊಂದಿಗೆ ಕ್ರಿಕೆಟ್ ಆಟಗಾರರು ಪಾಕಿಸ್ತಾನ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಆದರೆ ಈ ಸರಣಿಯ ಆರಂಭಕ್ಕೆ ಮುನ್ನ ವೆಸ್ಟ್ ಇಂಡೀಸ್ ತಂಡಕ್ಕೆ ಕೊರೊನಾ ವೈರಸ್ ಆಘಾತ ನೀಡಿದೆ. ವಿಂಡೀಸ್ ತಂಡ ಮೂವರು ಆಟಗಾರರು ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ಪಾಕಿಸ್ತಾಮಕ್ಕೆ ಪ್ರವಾಸ ಕೈಗೊಂಡಿರುವ ವಿಂಡೀಸ್ ಆಟಗಾರರ ಪೈಕಿ ಶೆಲ್ಡನ್ ಕಾಟ್ರೆಲ್, ರೋಸ್ಟೋನ್ ಚೇಸ್ ಹಾಗೂ ಕೈಲ್ ಮೇಯರ್ಸ್ ಕೋವಿಡ್ 19 ವೈರಸ್‌ಗೆ ತುತ್ತಾದ ಮೂವರು ಆಟಗಾರರಾಗಿದ್ದಾರೆ. ಅಲ್ಲದೆ ತಂಡದ ಓರ್ವ ಸಿಬ್ಬಂದಿಗೂ ಕೂಡ ಕೊರೊನಾವೈರಸ್ ಇರುವುದು ದೃಢಪಟ್ಟಿದೆ. ಇವರೆಲ್ಲರೂ 10 ದಿನಗಳ ಕಾಲ ಐಸೋಲೇಶನನ್‌ಗೆ ಒಳಗಾಗಿದ್ದಾರೆ. ಈ ನಾಲ್ವರು ಕೂಡ ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದು ಯಾವುದೇ ಪ್ರಮುಖ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ವಿಂಡೀಸ್ ಮಂಡಳಿ ಮಾಹಿತಿ ನೀಡಿದೆ.
ಇನ್ನು ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನಕ್ಕೆ ಬಂದಿಳಿದ ನಂತರದ ಕೊರಿನಾ ಪರೀಕ್ಷೆಯಲ್ಲಿ ಈ ವರದಿ ಬಂದಿದೆ. "ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು ಈಗ ರೂಮ್ ಐಸೋಲೇಶನ್‌ನಲ್ಲಿದ್ದಾರೆ. ಪಾಕಿಸ್ತಾನಕ್ಕೆ ಬರುವ ಮುನ್ನ ಹಾಗೂ ಪಾಕಿಸ್ತಾನಕ್ಕೆ ಬಂದಿಳಿದ ನಂತರ ಎರಡು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ನೆಗೆಟಿವ್ ವರದಿ ಬಂದಿರುವ ಕಾರಣದಿಂದಾಗಿ ಸರಣಿ ಮುಂದುವರಿಯುವ ವಿಶ್ವಾಸವಿದೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಸೋಮವಾರದಿಂದಲೇ ಈ ಸರಣಿ ಆರಂಭವಾಗಲಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಸರಣಿ ಇದಾಗಿದೆ.
ಭದ್ರತಾ ಕಾರಣಗಳನ್ನು ನೆಪವೊಡ್ಡಿ ನ್ಯೂಜಿಲೆಂಡ್ ಮಂಡಳಿ ಕೊನೇಯ ಕ್ಷಣದಲ್ಲಿ ಸರಣಿಯಿಂದ ಹಿಂದಕ್ಕೆ ಸರಿದಿತ್ತು. ಇದು ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನು ವಿಶ್ವಮಟ್ಟದಲ್ಲಿ ತರಿಸಿತ್ತು. ನಂತರ ಇಂಗ್ಲೆಂಡ್ ಕೂಡ ಬೇರೆ ಕಾರಣ ನೀಡಿ ಪಾಕಿಸ್ತಾನ ಪ್ರವಾಸವನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಮುಂದೆ ಬಂದಿದೆ.
ಇನ್ನು ಪಾಕಿಸ್ತಾನಕ್ಕೆ ಬಂದಿಳಿದಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ಭದ್ರತೆಯನ್ನು ಮಾಡಲಾಗಿದೆ. ಕರಾಚಿ ಪೊಲೀಸ್‌ನ 46 ಡಿಎಸ್‌ಪಿ, 13 ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ.ಅಲ್ಲದೆ, 315 ಎನ್‌ಜಿಒಗಳು, 3822 ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು, 50 ಮಹಿಳಾ ಗಾರ್ಡ್‌ಗಳು, 500 ರೆಪ್‌ಫೋರ್ಸ್ ಕಾನ್‌ಸ್ಟೆಬಲ್‌ಗಳು ಮತ್ತು 889 ಕಮಾಂಡೋಗಳು ಪ್ರವಾಸಿ ತಂಡದ ತಂಡದ ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.