
ಫೆಬ್ರವರಿ 6ರಿಂದ ಆರಂಭವಾಗಲಿರುವ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಲು ವೆಸ್ಟ್ ಇಂಡೀಸ್ ಭಾರತ ಪ್ರವಾಸವನ್ನು ಕೈಗೊಳ್ಳಬೇಕಾಗಿದ್ದು, ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಿದೆ. ಈ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 3 ಪಂದ್ಯಗಳನ್ನು ಗೆದ್ದು ಬೀಗಿರುವ ವೆಸ್ಟ್ ಇಂಡೀಸ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅತ್ತ ಈ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ಆ್ಯಶಸ್ ಸರಣಿಯ ಹೀನಾಯ ಮುಖಭಂಗದ ಬೆನ್ನಲ್ಲೇ ಮತ್ತೊಂದು ಸರಣಿಯನ್ನು ಸೋತಿದೆ.
ಹೌದು, ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡು ಕೆರಿಬಿಯನ್ನರ ವಿರುದ್ಧದ ಮೊದಲನೇ ಪಂದ್ಯದಲ್ಲಿ ಸೋಲುಂಡಿದ್ದ ಇಂಗ್ಲೆಂಡ್ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತ್ತು. ಹಾಗೂ ನಂತರ ನಡೆದ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಮತ್ತೆ ಗೆದ್ದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆದರೆ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಮತ್ತೊಂದು ಗೆಲುವನ್ನು ದಾಖಲಿಸಿದ ಇಂಗ್ಲೆಂಡ್ ಸರಣಿಯಲ್ಲಿ ಸಮಬಲವನ್ನು ಸಾಧಿಸಿತು. ಹೀಗೆ ಸರಣಿಯ 4 ಪಂದ್ಯಗಳು ಮುಗಿದ ನಂತರ ಇತ್ತಂಡಗಳು ಕೂಡ ತಲಾ ಎರಡೆರಡು ಗೆಲುವುಗಳನ್ನು ಸಾಧಿಸುವುದರ ಮೂಲಕ ಐದನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದವು.
ಹೀಗೆ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಅಂತಿಮ ಟಿ ಟ್ವೆಂಟಿ ಪಂದ್ಯ ಇಂದು ( ಜನವರಿ 31 ) ವೆಸ್ಟ್ ಇಂಡೀಸ್‌ನ ಕಿಂಗ್‍ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಪರ ಬ್ರೆಂಡನ್ ಕಿಂಗ್ 34, ಕೆ ಮೇಯರ್ಸ್ 31, ಕೀರನ್ ಪೊಲಾರ್ಡ್ ಅಜೇಯ 41 ಮತ್ತು ರೊವ್ಮಾನ್ ಪೊವೆಲ್ ಅಜೇಯ 35 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಈ ಮೂಲಕ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 180 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು.
ಹೀಗೆ ವೆಸ್ಟ್ ಇಂಡೀಸ್ ತಂಡ ನೀಡಿದ್ದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರರು ಕೈಹಿಡಿಯಲಿಲ್ಲ. ತಂಡದ ಜೇಮ್ಸ್ ವಿನ್ಸ್ 55 ರನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 41 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರರು ಕೂಡ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಈ ಮೂಲಕ ಇಂಗ್ಲೆಂಡ್ 19.5 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲ್ ಔಟ್ ಆಗಿದ್ದು, ಆತಿಥೇಯ ವೆಸ್ಟ್ ಇಂಡೀಸ್ ತಂಡ 17 ರನ್‌ಗಳ ಗೆಲುವನ್ನು ಸಾಧಿಸಿ ಸರಣಿಯನ್ನು 3-2 ಅಂತರದಲ್ಲಿ ವಶಪಡಿಸಿಕೊಂಡಿದೆ. ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ಸ್ಯಾಮ್ ಬಿಲಿಂಗ್ಸ್, ಮೊಯಿನ್ ಅಲಿ ಮತ್ತು ಕ್ರಿಸ್ ಜೋರ್ಡನ್ ಅವರ ವಿಕೆಟ್ ಸೇರಿದಂತೆ ಒಟ್ಟು 5 ವಿಕೆಟ್‍ಗಳನ್ನು ಪಡೆದು ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಜೇಸನ್ ಹೋಲ್ಡರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವುದರ ಜತೆಗೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.
ಅಂತಿಮವಾಗಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 20 ರನ್ ಬೇಕಾಗಿದ್ದ ಬೌಲಿಂಗ್ ಮಾಡಲು ಬಂದ ಜೇಸನ್ ಹೋಲ್ಡರ್ ಮೊದಲು ನೋ ಬಾಲ್ ಹಾಕಿ ನಂತರ ಮೊದಲನೇ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಹಾಗೂ ನಂತರ ಎರಡನೇ ಎಸೆತಕ್ಕೆ ಕ್ರಿಸ್ ಜೋರ್ಡನ್ ಕ್ಯಾಚ್ ನೀಡಿ ಔಟ್ ಆದರು, ಮೂರನೇ ಎಸೆತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು, ನಾಲ್ಕನೇ ಎಸೆತವನ್ನು ಎಸೆದ ಜೇಸನ್ ಹೋಲ್ಡರ್ ಆದಿಲ್ ರಶೀದ್ ಅವರ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು ಹಾಗೂ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವೆಸ್ಟ್ ಇಂಡೀಸ್ ತಂಡದ ಮೊದಲನೇ ಬೌಲರ್ ಎಂಬ ದಾಖಲೆಯನ್ನು ಕೂಡ ಬರೆದರು. ಹಾಗೂ ಅಂತಿಮವಾಗಿ ಓವರ್‌ನ ಐದನೇ ಎಸೆತವನ್ನು ಎದುರಿಸಿದ ಸಕಿಬ್ ಮೊಹಮ್ಮದ್ ಕ್ಲೀನ್ ಬೌಲ್ಡ್ ಆಗುವುದರ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ಸೋಲುಂಡಿತು.