ಪಾಕಿಸ್ತಾನ ತವರಿನಲ್ಲಿ ಮತ್ತೊಂದು ಟೆಸ್ಟ್ ಪಂದ್ಯವನ್ನು ಸೋತಿದೆ. ಈ ಬಾರಿ ಪಾಕ್ ತಾನು ತೋಡಿದ ಖೆಡ್ಡಾಗೆ ಬಲಿಯಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. 1990ರ ಬಳಿಕ ಪಾಕ್ ನೆಲದಲ್ಲಿ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಗೆದ್ದು ಬೀಗಿದೆ. ಎರಡನೇ ಟೆಸ್ಟ್‌ನಲ್ಲಿ ಪಾಕ್ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದ್ದು, ವೆಸ್ಟ್ ಇಂಡೀಸ್ ತಂಡದ ಸ್ಪಿನ್ ಬೌಲರ್. ಮೊದಲ ಟೆಸ್ಟ್‌ನ ವಿಂಡೀಸ್ ಬ್ಯಾಟರ್‌ಗಳಿಗೆ ಸ್ಪಿನ್ ಬಲೆ ಬೀಸಿದ್ದ, ಪಾಕ್ ಎರಡನೇ ಪಂದ್ಯದಲ್ಲಿ ಸ್ಪಿನ್ ಅಸ್ತ್ರದ ಮುಂದೆ ಮಂಡಿಯೂರಿತು.
ಮುಲ್ತಾನ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 120 ರನ್‌ಗಳಿಂದ ಗೆದ್ದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 163 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ಮೊದಲ ಇನಿಂಗ್ಸ್‌ನಲ್ಲಿ 154 ರನ್‌ಳಗೆ ಸರ್ವ ಪತನ ಕಂಡಿತು. ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ವಿಂಡೀಸ್ 244 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಪಾಕ್ 133 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಪ್ರಸಕ್ತ ಆವೃತ್ತಿಯನ್ನು ಸೋಲಿನೊಂದಿಗೆ ಮುಗಿಸಿದೆ.

ಪಾಕ್ ಮೊದಲ ಪಂದ್ಯದಲ್ಲಿ ಗೆದ್ದ ಬಳಿಕ ಆತ್ಮ ವಿಶ್ವಾಸದಿಂದ ಮೈದಾನಕ್ಕೆ ಇಳಿದಿತ್ತು. ಈ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಆರಂಭದಲ್ಲಿ ಮಂದಹಾಸ ಮೂಡಿತ್ತು. ಆದರೆ ಈ ನಗು ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಅರ್ಹ ಗೆಲುವು ದಾಖಲಿಸಿತು. ವಿಂಡೀಸ್ ತಂಡದ ಎರಡೂ ಇನಿಂಗ್ಸ್‌ಗಳಲ್ಲಿ ಜೋಮ್ಮೆಲ್ ವಾರಿಕನ್ ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದರು. ಇವರು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್‌ನಿಂದ ಅಜೇಯ 36 ರನ್ ಬಾರಿಸಿದ್ದರು. ಅಲ್ಲದೆ 4 ವಿಕೆಟ್ ಪಡೆದಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 85 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ವೇಳೆ ಪಾಕ್ ಬ್ಯಾಟರ್‌ಗಳನ್ನು ಎರಡನೇ ಇನಿಂಗ್ಸ್‌ನಲ್ಲಿ ಬಹುವಾಗಿ ಕಾಡಿ ಆರು ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್‌ನ ಬಲಿಷ್ಠ ಆಟಗಾರರಲ್ಲಿ ಒಬ್ಬರಾದ ಜೋಮ್ಮೆಲ್ ವಾರಿಕನ್ ಅವರಿಗೆ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗಿದೆ. ತಮ್ಮ ಮಾರಕ ಬೌಲಿಂಗ್ ಜೊತೆಗೆ, ಕೆಲವು ಸಂದರ್ಭಗಳಲ್ಲಿ ಅವರು ಬ್ಯಾಟಿಂಗ್‌ನಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರು. ಪಾಕಿಸ್ತಾನ ತನ್ನ ಅನುಕೂಲಕ್ಕಾಗಿ ಸ್ಪಿನ್ ಟ್ರ್ಯಾಕ್ ಅನ್ನು ಸಿದ್ಧಪಡಿಸಿಕೊಂಡಿತ್ತು, ಆದರೆ ವೆಸ್ಟ್ ಇಂಡೀಸ್ ತಂಡ ಇಲ್ಲಿ ಬಲಿಷ್ಠವಾಗಿದೆ ಎಂದು ಸಾಬೀತಾಯಿತು.

ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಗೆಲುವಿನ ಶೆಕಡಾವಾರು 30.13 ಆಗಿತ್ತು. ಈ ಪಂದ್ಯದಲ್ಲಿ ಸೋತ ಬಳಿಕ ಪಾಕ್ ಅಂಕ ಪಟ್ಟಿಯಲ್ಲಿ ಕುಸಿತ ಕಂಡಿದೆ. ಪಾಕ್ ಗೆಲುವಿನ ಶೆಕಡಾ ವಾರು 27.98 ಆಗಿದ್ದು, ಕೊನೆಯ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಎರಡನೇ ಪಂದ್ಯ ಗೆದ್ದು ಎಂಟನೇ ಸ್ಥಾನ ತಲುಪಿದೆ.