ಶೋಯೆಬ್ ಅಖ್ತರ್‌ಗೆ ತೆಂಡೂಲ್ಕರ್ ಸಿಕ್ಸ್ ಹೊಡೆದಾಗ ಕೊಹ್ಲಿ ಮಾಡಿದ್ದೇನು?
ಭಾರತ ಪಾಕಿಸ್ತಾನ ನಡುವಣ ಪಂದ್ಯ ಭಾರೀ ಜಿದ್ದಾ ಜಿದ್ದಿನಿಂದ ಕೂಡಿರುತ್ತದೆ. ಸಾಂಪ್ರದಾಯಿಕ ಎದುರಾಳಿಗಳ ಫೈಟ್ ಕಣ್ಣು ತುಂಬಿಕೊಳ್ಳಲು ಇಡೀ ಜಗತ್ತು ಕಾದಿರುತ್ತದೆ. ಈ ದೇಶಗಳ ನಡುವಿನ ಕಾದಾಟ ಅಂದರೆ ಖಂಡಿತವಾಗಿಯೂ ಈ ಒಂದು ದೃಶ್ಯ ನೆನಪಿಗೆ ಬಂದೇ ಬರುತ್ತದೆ.
ಈ ಸವಿ ನೆನಪಿನ ಬಗ್ಗೆ ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಮಾತನಾಡಿದ್ದಾರೆ. ಹೌದು.. 2003 ರ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಖಾಡ ಪ್ರವೇಶಿಸಿದ್ದವು. ಉಭಯ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇತ್ತು. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ವೇಗಿ ಶೋಯಿಬ್ ಅಖ್ತರ್ ನಡುವಿನ ಸೆಣಸಿನ ಮೇಲೆ ಎಲ್ಲರ ದೃಷ್ಟಿ ಇತ್ತು.

ಆ ಟೈಂನಲ್ಲಿ ಮಾರಕ ವೇಗಿ ಶೋಯಿಬ್ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡುತ್ತಿದ್ದರು. ಅವರ ಎಸೆತವನ್ನು ಎದುರಿಸುವುದೇ ಕಷ್ಟ.. ಅಂತಹದರಲ್ಲಿ ಅವರಿಗೆ ಪಾಯಿಂಟ್ ಮೇಲಿನಿಂದ ಸಿಕ್ಸರ್ ಬಾರಿಸಿ ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಸಚಿನ್ ಸಾಬೀತು ಮಾಡಿದ್ದರು.
ಈ ಶಾಟ್ ನಿಜಕ್ಕೂ ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿರಾಗಿದೆ. ಈ ಶಾಟ್ ಬಗ್ಗೆ ಈಗ ವಿರಾಟ್ ಕೊಹ್ಲಿ ತುಟಿ ಬಿಚಿದ್ದಾರೆ. "ಸಚಿನ್ ತೆಂಡೂಲ್ಕರ್ ಶೋಯೆಬ್ ಅಖ್ತರ್ ಗೆ ಆಫ್ ಸೈಡ್ ನಲ್ಲಿ ಸಿಕ್ಸರ್ ಬಾರಿಸಿದಾಗ ನಾನು ಉತ್ಸಾಹದಿಂದ ಜಿಗಿದಿದ್ದೆ" ಎಂದು ಕೊಹ್ಲಿ ಹೇಳಿದ್ದಾರೆ.
ತೆಂಡೂಲ್ಕರ್ ಅವರ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಸಿಕ್ಸರ್ ಸೇರಿತ್ತು. ಆ ಸಿಕ್ಸರ್ ಶೋಯೆಬ್ ಅಖ್ತರ್ ಅವರ ಎಸೆತದಲ್ಲಿ ಬಾರಿಸಿದ್ದಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 273 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಸಯೀದ್ ಅನ್ವರ್ 126 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಮಹತ್ವದ ಇನಿಂಗ್ಸ್ ಆಡಿದ್ದರು.
ಗುರಿ ಬೆನ್ನಟ್ಟಿದ ಭಾರತ ತಂಡ 45.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ಆರಂಭಿಕರಾಗಿ ಬಂದ ಸಚಿನ್ ತೆಂಡೂಲ್ಕರ್ 75 ಎಸೆತಗಳಲ್ಲಿ 130.67 ಸ್ಟ್ರೈಕ್ ರೇಟ್‌ನಲ್ಲಿ 98 ರನ್ ಗಳಿಸಿದರು. ತೆಂಡೂಲ್ಕರ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು.
ಈ ಉತ್ತಮ ಇನ್ನಿಂಗ್ಸ್‌ಗಾಗಿ ಅವರಿಗೆ 'ಪಂದ್ಯದ ಆಟಗಾರ' ಪ್ರಶಸ್ತಿ ಸಂದಿತು. ತೆಂಡೂಲ್ಕರ್ ಹೊರತುಪಡಿಸಿ ಯುವರಾಜ್ ಸಿಂಗ್ ಅಜೇಯ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 6 ಬೌಂಡರಿಗಳನ್ನು ಬಾರಿಸಿದರು. ಅದೇ ಸಮಯದಲ್ಲಿ ರಾಹುಲ್ ದ್ರಾವಿಡ್ 76 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications