
ಕ್ರೀಡೆಗೆ ಎಂದೂ ಗಡಿಯ ಹಂಗಿಲ್ಲ, ಅದರಲ್ಲೂ ಕ್ರಿಕೆಟಿಗರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಧೋನಿ ಸೇರಿದಂತೆ ಹಲವು ಕ್ರಿಕೆಟಿಗರು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಕೂಡ ಪಾಕಿಸ್ತಾನಿ ಆಟಗಾರರ ಬಗ್ಗೆ ಮಾಹಿತಿ ಇರುತ್ತದೆ. ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ವಾಸಿಂ ಅಕ್ರಂ ಭಾರತದಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
2009ರಲ್ಲಿ ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಂ ಅಂದು ಭಾರತೀಯರು ಮಾನವೀಯತೆಯಿಂದ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ರಂ ಅವರ ಪತ್ನಿಯನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.
ಪಾಕಿಸ್ತಾನದಿಂದ ಸಿಂಗಾಪುರಕ್ಕೆ ತೆರಳುವ ವಿಮಾನ ಇಂಧನ ತುಂಬಲು ಚೆನ್ನೈನಲ್ಲಿ ನಿಲುಗಡೆ ಮಾಡಿರುತ್ತದೆ. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವಾಸಿಂ ಅಕ್ರಮ್ ಪತ್ನಿಗೆ ವೈದ್ಯಕೀಯ ತುರ್ತುಪರಿಸ್ಥಿಯ ಅಗತ್ಯವಿರುತ್ತದೆ. ಅವರ ಪತ್ನಿ ಪ್ರಜ್ಞೆಯನ್ನು ಕಳೆದುಕೊಂಡಿರುತ್ತಾರೆ. ದಿಕ್ಕೇ ತೋಚದಂತಾದ ವಾಸಿಂ ಅಕ್ರಮ್ ಕಣ್ಣೀರು ಹಾಕುತ್ತಾರೆ.

ಆಸ್ಪತ್ರೆಗೆ ಕರೆದೊಯ್ಯಲು ಸಹಾಯ
ಈ ಸಂದರ್ಭದಲ್ಲಿ ಅವರನ್ನು ಗುರುತಿಸಿದ ಭಾರತೀಯರು ಸಹಾಯಕ್ಕೆ ಧಾವಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿ ಅವರ ಪತ್ನಿಗೆ ವೈದ್ಯಕೀಯ ನೆರವು ನೀಡಲು ಮುಂದಾಗುತ್ತಾರೆ. "ಭಾರತದ ವೀಸಾ ಇಲ್ಲದೆ ನಾವು ಭಾರತದಲ್ಲಿ ಇಳಿಯುವಂತಿಲ್ಲ ಎನ್ನುವ ಕಾನೂನು ಇದ್ದರು, ಅದರ ಬಗ್ಗೆ ಚಿಂತಿಸದೆ ನನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ಒಬ್ಬ ಕ್ರಿಕೆಟಿಗನಾಗಿ ಮತ್ತು ಮನುಷ್ಯನಾಗಿ ಆ ಘಟನೆಯನ್ನು ಎಂದಿಗೂ ಮರೆಯಲಾರೆ" ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.
"ನನ್ನ ಹೆಂಡತಿ ಪ್ರಜ್ಞಾಹೀನಳಾಗಿದ್ದಳು, ಚೆನ್ನೈ ವಿಮಾನ ನಿಲ್ದಾಣದ ಜನರು, ಭದ್ರತಾ ಪಡೆಗಳು ಮತ್ತು ಕಸ್ಟಮ್ಸ್ ಮತ್ತು ಇಮಿಗ್ರೇಷನ್ ಅಧಿಕಾರಿಗಳು ವೀಸಾದ ಬಗ್ಗೆ ಚಿಂತಿಸಬೇಡಿ ಮತ್ತು ನನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದರು" ಎಂದು ವಾಸಿಂ ಅಕ್ರಮ್ ಹೇಳಿದರು.

ಚೆನ್ನೈ ಟೆಸ್ಟ್ ಬಗ್ಗೆ ಮಾತನಾಡಿದ ಅಕ್ರಮ್
ಜನರು ಕ್ರಿಕೆಟಿಗರ ಮೇಲಿಟ್ಟಿರುವ ಈ ಪ್ರೀತಿಯೇ ಸಹಾಯ ಮಾಡಲು ಕಾರಣವಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ನಂಬಿದ್ದಾರೆ. ತಮ್ಮ ಅಮೂಲ್ಯ ನೆನಪುಗಳಲ್ಲಿ ಚೆನ್ನೈ ಹೇಗೆ ವಿಶೇಷ ಸ್ಥಾನವನ್ನು ಹೊಂದಿದೆ ಎನ್ನುವುದನ್ನು ಅವರು ಹಂಚಿಕೊಂಡಿದ್ದಾರೆ. 1999ರಲ್ಲಿ ಚೆನ್ನೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ತನಗೆ ಸ್ಮರಣೀಯ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
"ಚೆನ್ನೈ ಟೆಸ್ಟ್ ನನಗೆ ತುಂಬಾ ವಿಶೇಷವಾಗಿದೆ. ಸಾಕಷ್ಟು ಬಿಸಿಲು ಇತ್ತು, ಪಿಚ್ ಕೂಡ ತುಂಬಾ ಒಣಗಿತ್ತು, ಅದು ನಮ್ಮ ರಿವರ್ಸ್ ಸ್ವಿಂಗ್ ಬೌಲಿಂಗ್‌ಗೆ ಸಾಕಷ್ಟು ನೆರವು ನೀಡುತ್ತಿತ್ತು. ನಮ್ಮ ತಂಡದಲ್ಲಿ ಅತ್ಯುತ್ತಮ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಇದ್ದರು. ಅವರು ಸಚಿನ್ ತೆಂಡೂಲ್ಕರ್ ಗೆ ದೂಸ್ರಾ ಎಸೆತಗಳನ್ನು ಬೌಲ್ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ಬೇಗನೆ ಔಟಾದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್ ದೂಸ್ರಾ ಎಸೆತಗಳಿಗೆ ಆಡುವುದನ್ನು ಅಭ್ಯಾಸ ಮಾಡಿಕೊಂಡರು. ಪ್ರತಿ ಬಾರಿ ಅವರು ದೂಸ್ರಾ ಬೌಲ್ ಮಾಡಿದಾಗ, ಸಚಿನ್ 'ಕೀಪರ್'ನ ಹಿಂದೆಯೇ ಲ್ಯಾಪ್ ಶಾಟ್‌ಗೆ ಹೋದರು. ಕಡಿಮೆ ಸಮಯದಲ್ಲಿ ಅವರು ದೂಸ್ರಾಗೆ ಆಡುವುದನ್ನು ಕರಗತ ಮಾಡಿಕೊಂಡರು. ಅದಕ್ಕಾಗಿಯೇ ಸಚಿನ್ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಎಂದು ಅಕ್ರಮ್ ಹೊಗಳಿದ್ದಾರೆ.