ಮಂಗಳವಾರ, ಜೂನ್ 18ರಂದು ಸೇಂಟ್ ಲೂಸಿಯಾದ ಡೇರೆನ್ ಸ್ಯಾಮಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಪ್ರವಾಸಿ ಅಫ್ಘಾನಿಸ್ತಾನ ತಂಡದ ವಿರುದ್ಧ 104 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
2024ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ತಂಡವು ತಮ್ಮ ಸಿ ಗುಂಪು ಪಂದ್ಯದ ವೇಳೆ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಹಲವು ದಾಖಲೆಗಳನ್ನು ಛಿದ್ರಗೊಳಿಸುವ ಉತ್ಸಾಹದಲ್ಲಿ ಕಂಡುಬಂದರು.

ಸ್ಫೋಟಕ ಬ್ಯಾಟರ್‌ಗಳಾದ ನಿಕೋಲಸ್ ಪೂರನ್ ಮತ್ತು ಜಾನ್ಸನ್ ಚಾರ್ಲ್ಸ್ ಜೋಡಿ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸರಿಗಟ್ಟಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ ಒಂದೇ ಓವರ್‌ನಲ್ಲಿ 36 ರನ್ ಕಲೆಹಾಕಿದರು. ಇನಿಂಗ್ಸ್‌ನ 4ನೇ ಓವರ್ ಬೌಲ್ ಮಾಡಲು ಅಜ್ಮತುಲ್ಲಾ ಒಮರ್ಜಾಯ್ ಬಂದಾಗ ಇದು ಸಂಭವಿಸಿತು.
ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿಯೇ ಸಿಕ್ಸರ್ ಸಿಡಿಸಿದ ನಿಕೋಲಸ್ ಪೂರನ್, ನಂತರದ ನೋ ಬಾಲ್ ಎಸೆತವನ್ನು ಬೌಂಡರಿ ಬಾರಿಸಿದರು. ನಂತರದ ಎಸೆತವು ವೈಡ್‌ನೊಂದಿಗೆ ಬೌಂಡರಿಗೆ ಹೋಯಿತು ಮತ್ತು 5 ರನ್‌ಗಳು ಬಂದವು.
ಫ್ರೀ ಹಿಟ್ ಮುಂದುವರೆದಿದ್ದರಿಂದ ನಿಕೋಲಸ್ ಪೂರನ್ ಬೌಲ್ಡ್ ಆದರೂ ನಾಟೌಟ್ ಆಗಿತ್ತು. ಮೂರನೇ ಎಸೆತವು ಲೆಗ್ ಬೈ ಮೂಲಕ ಮತ್ತೆ ನಾಲ್ಕು ರನ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಬೌಲರ್ ತತ್ತರಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳೊಂದಿಗೆ ದಾಖಲೆಯ ರನ್‌ಗಳು ಬಂದವು.
ಅಂದರೆ, ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಒಂದೇ ಓವರ್‌ನಲ್ಲಿ 36 ರನ್‌ಗಳು ಕಬಳಿಸಿದರು. ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತನ್ನ ಇದುವರೆಗಿನ ಅತ್ಯಧಿಕ ಪವರ್‌ಪ್ಲೇ, ಅಂದರೆ 93 ರನ್‌ಗಳನ್ನು ಗಳಿಸಿತು.

ಅಜ್ಮತುಲ್ಲಾ ಒಮರ್ಜಾಯ್ ಅವರ ಪಂದು ಓವರ್‌ನಲ್ಲಿ 10 ಎಕ್ಸ್‌ಟ್ರಾಗಳು ಅಂದರೆ 5 ವೈಡ್‌ಗಳು, ಒಂದು ನೋ-ಬಾಲ್ ಮತ್ತು ನಾಲ್ಕು ಲೆಗ್-ಬೈ ರನ್‌ಗಳು ಸೇರಿದ್ದವು.
ಇನ್ನು ವೆಸ್ಟ್ ಇಂಡೀಸ್‌ನ ಬ್ಯಾಟರ್ ನಿಕೋಲಸ್ ಪೂರನ್ ಆಕ್ರಮಣಕಾರಿ ಬ್ಯಾಟಿಂಗ್ ಅವರನ್ನು ಗಣ್ಯರ ಪಟ್ಟಿಗೆ ಪ್ರವೇಶಿಸುವಂತೆ ಮಾಡಿತು. ಈ ಪಟ್ಟಿಯಲ್ಲಿ 3 ಭಾರತೀಯ ಆಟಗಾರರು ಇದ್ದಾರೆ.
ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ ನಂತರ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದರು.
ಅಫ್ಘಾನಿಸ್ತಾನದ ಕರೀಂ ಜನತ್ ಬೌಲಿಂಗ್‌ನ ಒಂದು ಓವರ್‌ನಲ್ಲಿ 36 ರನ್ ಗಳಿಸಿದ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಕಲೆಹಾಕಿತು. ಜಾನ್ಸನ್ ಚಾರ್ಲ್ಸ್ 27 ಎಸೆತಗಳಲ್ಲಿ 8 ಬೌಂಡರಿ ಸಮೇತ 43 ರನ್ ಗಳಿಸಿದರೆ, ನಿಕೋಲಸ್ ಪೂರನ್ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಮೂಲಕ 98 ರನ್ ಬಾರಿಸಿದರು.
219 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 16.2 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಇಬ್ರಾಹಿಂ ಝದ್ರಾನ್ 38 ರನ್, ಅಜ್ಮತುಲ್ಲಾ ಒಮರ್ಜಾಯ್ 23 ರನ್, ರಶೀದ್ ಖಾನ್ 18 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳ ವಿಫಲರಾದರು.