374 ರನ್ ಬೆನ್ನಟ್ಟಿ ಪಂದ್ಯ ಟೈ ಮಾಡಿಕೊಂಡ ನೆದರ್ಲೆಂಡ್ಸ್: ಸೂಪರ್ ಓವರ್‌ನಲ್ಲೂ ವಿಂಡೀಸ್‌ಗೆ ಶಾಕ್!
ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ನೆದರ್ಲೆಂಡ್ಸ್ ವಿರುದ್ಧದ ಮುಖಾಮುಖಿ ಅಭಿಮಾನಿಗಳಿಗೆ ರಣರೋಚಕ ಅನುಭವ ನೀಡಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 374 ರನ್‌ಗಳ ಬೃಹತ್ ರನ್‌ಗಳಿಸಿದರೆ ಈ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ಕೂಡ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದು ನಿಗದಿತ 50 ಓವರ್‌ಗಳಲ್ಲಿ 374 ರನ್‌ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ನೆದರ್ಲೆಂಡ್ಸ ತಂಡ ದಾಖಲೆಯ 30 ರನ್‌ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ವಿಂಡೀಸ್ ಕೇವಲ 8 ರನ್‌ಗಳಿಸಿ ಸೋಲೊಪ್ಪಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದು ಮೊದಲ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ಪಡೆಯಿತು. ಆರಂಭಿಕರಾದ ಬ್ರೆಂಡನ್ ಕಿಂಗ್ ಹಾಗೂ ಜಾನ್ಸನ್ ಚಾರ್ಲ್ಸ್ ಇಬ್ಬರು ಕೂಡ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಶಾಯ್ ಹೋಪ್ 47 ರನ್‌ಗಳ ಕೊಡುಗೆ ನೀಡಿದರೆ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಮೋಘ ಶತಕ ಸಿಡಿಸಿದರು.

ಬೃಹತ್ ಮೊತ್ತದ ಗುರಿ ನೀಡಿದ ವೆಸ್ಟ್ ಇಂಡೀಸ್
65 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 9 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ್ದು 104 ರನ್‌ಗಳ ಕೊಡುಗೆ ನೀಡಿ ಅಜೇಯವಾಗುಳಿದರು. ಇವರಿಗೆ ಅಂತಿಮ ಹಂತದಲ್ಲಿ ಕೊಮೋ ಪೌಲ್ ಅದ್ಭುತವಾಗಿ ಸಾಥ್ ನಿಡಿದ್ದು 25 ಎಸೆತಗಳಲ್ಲಿ 46 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದಕೊಂಡು 374 ರನ್‌ಗಳಿಸಿತು.
ರೋಚಕ ಪಂದ್ಯ ಟೈ!!
ಈ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡಕ್ಕೆ ಕೂಡ ಉತ್ತಮ ಆರಂಭ ದೊರೆಯಿತು. ಆದರೆ ಪಂದ್ಯಕ್ಕೆ ತಿರುವು ನೀಡಿದ್ದು ತೇಜ ನಿಡಮನೂರು ಅವರ ಬ್ಯಾಟಿಂಗ್. 76 ಎಸೆತಗಳನ್ನು ಎದುರಿಸಿದ ತೇಜ ನಿಡಮನೂರು ಭರ್ಜರಿ 111 ರನ್‌ಗಳನ್ನು ಗಳಿಸಿದರು. ಇವರಿಗೆ ಸಾಥ್ ನಿಡಿದ ನಾಯಕ ಸ್ಕಾಟ್ ಎಡ್ವರ್ಡ್ 67 ರನ್‌ಗಳಿಸಿದರು. ಆದರೆ ಈ ಮೊತ್ತವನ್ನು ಬೆನ್ನಟ್ಟಿ ಗೆಲುವಿನ ಗುರಿ ದಾಟಲು ವಿಫಲವಾದರೂ ನೆದರ್ಲೆಂಡ್ಸ್ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಸೂಪರ್ ಓವರ್‌ನಲ್ಲಿ ವಿಶ್ವದಾಖಲೆ
ಪಂದ್ಯ ಟೈ ಆದ ಕಾರಣ ಸೂಪರ್ ಓವರ್‌ನಲ್ಲಿ ಪಂದ್ಯದ ಫಲಿತಾಂಶ ನಿರ್ಧರಿಸುವುದು ಅನಿವಾರ್ಯವಾಯಿತು. ಸೂಪರ್ ಓವರ್‌ನಲ್ಲಿ ಮೊದಲಿಗೆ ನೆದರ್ಲೆಂಡ್ಸ್ ತಂಡ ಬ್ಯಾಟಿಂಗ್‌ಗೆ ಇಳಿಯಿತು. ವಾನ್ ಬೀಕ್ ಹಾಗೂ ಎಡ್ವರ್ಡ್ಸ್ ಬ್ಯಾಟಿಂಗ್‌ಗೆ ಇಳಿದರೆ ಅನುಭವಿ ಜೇಸನ್ ಹೋಲ್ಡರ್ ಬೌಲಿಂಗ್ ದಾಳಿ ನಡೆಸಿದರು. ಈ ಓವರ್‌ನಲ್ಲಿ ವಾನ್ ಬೀಕ್ ಯಾರೂ ನಿರೀಕ್ಷಿಸದಂತಾ ಬ್ಯಾಟಿಂಗ್ ಪ್ರದರ್ಶಿಸಿದ್ದು ಎಲ್ಲಾ ಆರು ಎಸೆತಗಳನ್ನು ಕೂಡ ಬೌಂಡರಿಯಾಚೆ ಅಟ್ಟಿದರು. ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ ವಾನ್ ಬೀಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೂಪರ್ ಓವರ್‌ನಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ದಾಖಲೆ ಬರೆದರು.
ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ
ಇನ್ನು ಈ ಮೊತ್ತವನ್ನು ಬೆನ್ನಟ್ಟಲು ಕಣಕ್ಕಿಳಿದ ವೆಸ್ಟ್ ಇಂಡೀಸ್ ತಂಡ ಕೇವಲ 8 ರನ್‌ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತು. ಈ ಮೂಲಕ ನೆದರ್ಲೆಂಡ್ಸ್ ತಂಡಕ್ಕೆ ಶರಣಾಗಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಮೋಘ ಗೆಲುವು ಸಾಧಿಸಿದ ಆತ್ಮವಿಶ್ವಾಸದೊಂದಿಗೆ ನೆದರ್ಲೆಂಡ್ಸ್ ತಂಡ ಮುಂದಿನ ಹಂತಕ್ಕೇರಿದೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರೆಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಶಮರ್ ಬ್ರೂಕ್ಸ್, ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಕೀಮೋ ಪಾಲ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್
ಬೆಂಚ್: ಕೈಲ್ ಮೇಯರ್ಸ್, ರೋವ್ಮನ್ ಪೊವೆಲ್, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ
ನೆದರ್ಲೆಂಡ್ಸ್: ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ಕ್ಲೇಟನ್ ಫ್ಲಾಯ್ಡ್, ಆರ್ಯನ್ ದತ್, ವಿವಿಯನ್ ಕಿಂಗ್ಮಾ
ಬೆಂಚ್: ಶರೀಜ್ ಅಹ್ಮದ್, ರಿಯಾನ್ ಕ್ಲೈನ್, ಮೈಕೆಲ್ ಲೆವಿಟ್, ನೋಹ್ ಕ್ರೋಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications