
ಗುರುವಾರ, ಮಾರ್ಚ್ 16ರಂದು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 11 ರನ್‌ಗಳ ಅಮೋಘ ಗೆಲುವು ಸಾಧಿಸಿದೆ.
ಗುಜರಾತ್ ಜೈಂಟ್ಸ್ ನೀಡಿದ್ದ 148 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.4 ಓವರ್‌ಗಳಲ್ಲಿ ಸರ್ವಪತನ ಕಂಡು 11 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಕಿಮ್ ಗಾರ್ಥ್, ಆಶ್ಲೀಗ್ ಗಾರ್ಡ್ನರ್ ಮತ್ತು ತನುಜಾ ಕನ್ವರ್ ಅವರ ಮಾರಕ ಬೌಲಿಂಗ್ ದಾಳಿಗೆ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳು ತಂಡವನ್ನು ಗೆಲುವಿನ ಗಡಿ ತಲುಪಿಸಲು ವಿಫಲರಾದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನ್ನಿಂಗ್ ಮತ್ತು ಶಫಾಲಿ ವರ್ಮಾ ದೊಡ್ಡ ಜೊತೆಯಾಟ ನೀಡಲು ವಿಫಲರಾದರು. ಶಫಾಲಿ ವರ್ಮಾ 8 ರನ್ ಗಳಿಸಿ ಔಟಾದರೆ, ಮೆಗ್ ಲ್ಯಾನ್ನಿಂಗ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಆಲಿಸ್ ಕ್ಯಾಪ್ಸೆ 11 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 22 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆಲ್‌ರೌಂಡರ್ ಮಾರಿಜಾನ್ನೆ ಕಾಪ್ 29 ಎಸೆತಗಳಲ್ಲಿ 36 ರನ್ ಬಾರಿಸಿದರು. ಜೆಸ್ ಜೊನಾಸ್ಸೆನ್ 4 ರನ್, ತಾನಿಯಾ ಭಾಟಿಯಾ 1 ರನ್ ಗಳಿಸಿದರೆ, ಕೊನೆಯಲ್ಲಿ ಅರುಂಧತಿ ರೆಡ್ಡಿ 17 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅವರ ವಿಕೆಟ್ ಬೀಳುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲು ಖಚಿತವಾಯಿತು.
ಗುಜರಾತ್ ಜೈಂಟ್ಸ್ ಪರ ಬೌಲಿಂಗ್‌ನಲ್ಲಿ ಕಿಮ್ ಗಾರ್ಥ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಆಶ್ಲೀಗ್ ಗಾರ್ಡ್ನರ್ 3.4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ತನುಜಾ ಕನ್ವರ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಸ್ನೇಹ್ ರಾಣಾ ಮತ್ತು ಹರ್ಲೀನ್ ಡಿಯೋಲ್ ತಲಾ ಒಂದೊಂದು ವಿಕೆಟ್ ಪಡೆದರು.
IPL 2023: ಗಾಯಾಳು ವಿಲ್ ಜಾಕ್ಸ್ ಬದಲಿಗೆ ಈ ಮೂವರು ಆಲ್‌ರೌಂಡರ್‌ಗಳ ಮೇಲೆ RCB ಕಣ್ಣು
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ್ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು.
ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಇನ್ನಿಂಗ್ಸ್ ಆರಂಭಿಸಿದರು. ಒಂದು ಓವರ್‌ನಲ್ಲಿ 4 ರನ್‌ಗಳಾಗುವಷ್ಟರಲ್ಲಿ ಸೋಫಿಯಾ ಡಂಕ್ಲೆ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಹರ್ಲೀನ್ ಡಿಯೋಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು.
33 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಗಳಿಸಿದ್ದ ಹರ್ಲೀನ್ ಡಿಯೋಲ್ ವಿಕೆಟ್ ಒಪ್ಪಿಸಿದರು. ಆಗ, ಲಾರಾ ವೊಲ್ವಾರ್ಡ್ಟ್ ಜೊತೆಗೂಡಿದ ಆಶ್ಲೇಗ್ ಗಾರ್ಡ್ನರ್ ಉತ್ತಮ ಜೊತೆಯಾಟ ನೀಡಿದರು.
ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ಟ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಔಟಾದರೆ, ಆಶ್ಲೇಗ್ ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 51 ರನ್ ಗಳಿಸಿ ಅಜೇಯರಾಗುಳಿದರು.
ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮರಿಜಾನ್ನೆ ಕಾಪ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.