ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಆರಂಭವಾಗುತ್ತಿದ್ದಂತೆಯೇ ಟೀಮ್ ಇಂಡಿಯಾದ ಆಡುವ ಬಳಗದ ನೊಡಿದ ಎಲ್ಲರಿಗೂ ಅಚ್ಚರಿ ಕಾದಿತ್ತು. ವಿಶ್ವದ ನಂಬರ್ 1 ಬೌಲರ್, ನಂಬರ್ 2 ಆಲ್‌ರೌಂಡರ್ ಆರ್ ಅಶ್ವಿನ್ ಈ ಐತಿಹಾಸಿಕ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಇದೀಗ ಪಂದ್ಯ ಕುಗಿದಿದ್ದು ಭಾರತ ಸೋಲು ಕಂಡೂ ಆಗಿದೆ. ಈಗ ಮತ್ತೆ ಆರ್ ಅಶ್ವಿನ್ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸದ ವಿಚಾರವಾಗಿ ಮತ್ತೊಂದು ಹಂತದ ವಿಮರ್ಶೆಗಳು ನಡೆಯುತ್ತಿದೆ. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಈ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಆದರೆ ಇದೆಲ್ಲದರ ಮಧ್ಯೆ ಆರ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ತಮಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ ಟೀಮ್ ಇಂಡಿಯಾದ ಆಟಗಾರರ ಹೋರಾಟದ ಪ್ರದರ್ಶನ ಹಾಗೂ ಮ್ಯಾನೇಜ್‌ಮೆಂಟ್ ಬಗ್ಗೆ ಆರ್ ಅಶ್ವಿನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಆರ್ ಅಶ್ವಿನ್ ಆಸ್ಟ್ರೇಲಿಯಾ ತಂಡವನ್ನು ಅಭಿನಂದಿಸಿದ್ದು ಭಾರತ ತಂಡದ ಆಟಗಾರರು ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ನೀಡಿದ ಸಂಘಟಿತ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಆಸ್ಟ್ರೆಲಿಯಾ ತಂಡಕ್ಕೆ ಅಭಿನಂದನೆಗಳು. ಆದರೆ ಸೋಲಿನ ಮೂಲಕ ಈ ಅಭಿಯಾನ ಅಂತ್ಯವಾಗಿರುವುದು ಬೇಸರ ಮೂಡಿಸಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ನೀಡಿದ ಅದ್ಭುತ ಪ್ರದರ್ಶನಗಳಿಂದಾಗಿಯೇ ಈ ಹಂತವನ್ನು ಪ್ರವೇಶಿಸಲು ಸಾರ್ಧಯವಾಯಿತು" ಎಂದು ಆರ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.
ಮುಂದುವರಿದು ಅವರು ತಂಡದ ಪ್ರದರ್ಶನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ವಿಚಾರವಾಗಿಯೂ ತಂಡವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಎಲ್ಲಾ ಟೀಕೆ ಹಾಗೂ ಕಟು ವಿಮರ್ಶೆಗಳ ಮಧ್ಯೆಯೂ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ನನ್ನ ಎಲ್ಲಾ ಸಹ ಆಟಗಾರರನ್ನು ಮತ್ತು ನಮಗೆ ಬಂಡೆಯಂತೆ ಬೆನ್ನೆಲುಬಾಗಿ ನಿಂತ ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿಗಳ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಲೇಬೇಕು" ಎಂದಿದ್ದಾರೆ ಆರ್ ಅಶ್ವಿನ್.

ಇನ್ನು ಆರ್ ಅಶ್ವಿನ್ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸದ ಬಗ್ಗೆ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು ಯಾವ ಕಾರಣಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ ಎಂದಿದ್ದಾರೆ. ಅಲ್ಲದೆ ನಂಬರ್ 1 ಬೌಲರ್ ಆಗಿರುವ ಅಶ್ವಿನ್ ಯಾವುದೇ ಪಿಚ್‌ನಲ್ಲಿಯಾದರೂ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ ಎಂದಿದ್ದಾರೆ.
"ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಹೊರಗಿಡಲು ಕಾರಣವೇನು ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ನನ್ನಿಂದ ಇನ್ನು ಕೂಡ ಸಾಧ್ಯವಾಗಿಲ್ಲ. ಆತ ವಿಶ್ವದ ನಂಬರ್ 1 ಟೆಸ್ಟ್ ಬೌಲರ್. ಈಗಾಗಲೇ ಪಂದ್ಯಕ್ಕೂ ಮುನ್ನ ಹೇಳಿದಂತೆ ಕೌಶಲ್ಯ ಹೊಂದಿರುವ ಸ್ಪಿನ್ನರ್‌ಗಳಿಗೆ ಟರ್ನಿಂಗ್ ಟ್ರ್ಯಾಕ್‌ನ ಅಗತ್ಯವಿರುವುದಿಲ್ಲ. ಅವರು ಅಲ್ಲಿನ ವಾತಾವರಣ ಹಾಗೂ ಪಿಚ್‌ನ ಮೇಲ್ಮೈಯನ್ನು ಬಳಸಿಕೊಂಡು ಏರಿಳಿತಗಳನ್ನು ಮಾಡಬಲ್ಲರು" ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಸಚಿನ್ ತೆಂಡೂಲ್ಕರ್.