
ಪಾಕಿಸ್ತಾನದ ಅನುಭವಿ ಲೆಗ್ ಸ್ಪಿನ್ನರ್ ಯಾಸಿರ್ ಶಾ ವಿರುದ್ಧ ಇತ್ತೀಚೆಗೆ ಅತ್ಯಾಚಾರದ ಆರೋಪ ಕೇಳಿಬಂದಿದ್ದಲ್ಲದೆ, ಆತನ ಹಾಗೂ ಸ್ನೇಹಿತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಕೊನೆಗೂ ಮೌನ ಮುರಿದಿದ್ದಾರೆ.
14 ವರ್ಷದ ಅಪ್ರಾಪ್ತ ಬಾಲಕಿಯು ಕ್ರಿಕೆಟಿಗ ಯಾಸಿರ್ ಶಾ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದು, ಈ ಕುರಿತು ಇಸ್ಲಮಾಬಾದ್‌ನಲ್ಲಿ ಎಫ್ಐಆರ್ ದಾಖಲಾಗಿದೆ. ಸ್ಪಿನ್ನರ್ ಯಾಸಿರ್ ಶಾ ತನ್ನ ಸ್ನೇಹಿತನಿಗೆ ಹುಡುಗಿಯೊಬ್ಬಳನ್ನು ಅಪಹರಿಸಲು, ಕಿರುಕುಳ ನೀಡಲು ಮತ್ತು ಬೆದರಿಕೆ ಹಾಕಲು ಸಹಾಯ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಕ್ರಿಕೆಟಿಗ ಯಾಸಿರ್ ಶಾ ಹಾಗೂ ಆತನ ಸ್ನೇಹಿತ ಫರ್ಹಾನ್ ಮೇಲೂ ಪ್ರಕರಣ ದಾಖಲಾಗಿದೆ. ಯಾಸಿರ್ ಶಾ ಪಾಕಿಸ್ತಾನಿ ಟೆಸ್ಟ್ ತಂಡದ ಪ್ರಮುಖ ಆಟಗಾರ. ಇಲ್ಲಿಯವರೆಗೆ ಶಾ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದು 235 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಟೆಸ್ಟ್ ನಲ್ಲಿ ಒಂದು ಶತಕ ಗಳಿಸಿದ್ದಾರೆ.
ಬಾಲಕಿ ದೂರು ನೀಡಿದ ನಂತರ ಲಾಹೋರ್‌ನ ಶಾಲಿಮಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯಾಸಿರ್ ಶಾ ಸ್ನೇಹಿತ ಫರ್ಹಾನ್ ತನಗೆ ಗನ್ ತೋರಿಸಿ ಅಪಹರಿಸಿ, ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ನಂತರ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾರೆ.
ಯಾಸಿರ್ ಶಾ ತನ್ನ ಸ್ನೇಹಿತನಿಗೆ ಸಹಾಯ ಮಾಡಿದನೆಂದು ಹುಡುಗಿ ಆರೋಪಿಸಿದ್ದಾಳೆ ಮತ್ತು ನಂತರ ಫರ್ಹಾನ್ ಜೊತೆಗೂಡಿ ಈ ಕುರಿತಾಗಿ ಧ್ವನಿ ಎತ್ತಿದರೆ ತನ್ನ ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ರಾಜಾ, ಈ ವಿವಾದವು ಪಾಕಿಸ್ತಾನ ಕ್ರಿಕೆಟ್‌ಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
"ಇದು ಯಾವುದೇ ಬುದ್ದಿವಂತನು ಮಾಡುವ ಕೆಲಸವಲ್ಲ, ಯಾಸಿರ್ ಸರ್ಕ್ಯೂಟ್ ಆಟಗಾರ ಮತ್ತು ನಾವು ಈ ಆಟಗಾರರಿಗೆ ತರಬೇತಿ ಮತ್ತು ಶಿಕ್ಷಣ ನೀಡುತ್ತಿರುವಾಗ ಅವರು ಕ್ರಿಕೆಟ್ ರಾಯಭಾರಿ ಆಗಿರುತ್ತಾರೆ. ಅವರು ಯಾರೊಂದಿಗೆ ಮತ್ತು ಎಲ್ಲಿ ಬೆರೆಯಬೇಕು ಎಂದು ತಿಳಿದಿರಬೇಕು" ಎಂದು ರಮೀಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯಾಸಿರ್ ಶಾ ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ಮೊದಲ ಪಾಕಿಸ್ತಾನಿ ಕ್ರಿಕೆಟಿಗರೇನಲ್ಲ. ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಇಂತಹ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ. ಆದರೆ, ಆ ಆರೋಪಗಳನ್ನು ಸಾಭೀತುಪಡಿಸಲು ಸಾಧ್ಯವಾಗಿಲ್ಲ.