
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್, ತಂಡದ ಆಟಗಾರರಾದ ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡ ಒಟ್ಟಾಗಿ ಆಡುವ ಕುರಿತಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಈ ಇಬ್ಬರು ಆಟಗಾರರು ಹೇಗೆ ಒಟ್ಟಾಗಿ ಆಡಲಿದ್ದಾರೆ ಎಂಬ ಪ್ರಶ್ನೆಗೆ ಗಂಭೀರ್ ತನ್ನದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಕೃನಾಲ್ ಮತ್ತು ಹೂಡ ವಿವಾದಕ್ಕೆ ಕಾರಣವಾಗಿದ್ರು. ಕೃನಾಲ್ ಪಾಂಡ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ದೀಪಕ್ ಹೂಡ ಬರೋಡಾ ತಂಡದಿಂದ ಹೊರಬಂದಿದ್ದರು. ಆದ್ರೀಗ ಐಪಿಎಲ್ 15ನೇ ಸೀಸನ್ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಈ ಇಬ್ಬರು ಆಟಗಾರರನ್ನ ಒಂದಾಗಿಸಿದೆ.
ಈ ಇಬ್ಬರು ಆಟಗಾರರು ಸ್ಪಿನ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾಗಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಹೀಗಾಗಿ ಇವರಿಬ್ಬರ ನಡುವಿನ ಸಂಬಂಧ ಉತ್ತಮವಿಲ್ಲದಿದ್ದಾಗಿ, ಒಟ್ಟಿಗೆ ಹೇಗೆ ಪ್ರದರ್ಶನ ನೀಡಬಲ್ಲರು ಎಂಬ ಪ್ರಶ್ನೆಗೆ ಗಂಭೀರ್ ಉತ್ತರಿಸಿದ್ದಾರೆ.
"ನೋಡಿ, ಪ್ರದರ್ಶನ ನೀಡಲು ನೀವು ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿರಬೇಕಾಗಿಲ್ಲ. ಅವರು ವೃತ್ತಿಪರರು ಮತ್ತು ಅವರಿಗೆ ಮಾಡಲು ಕೆಲಸವಿದೆ ಎಂದು ಅವರಿಗೆ ತಿಳಿದಿದೆ. ನೀವು ಒಂದೇ ತಂಡದಲ್ಲಿ ಆಡುತ್ತಿದ್ದರೆ ನೀವು ಪ್ರತಿದಿನ ರಾತ್ರಿ ಊಟಕ್ಕೆ ಹೋಗಬೇಕಾಗಿಲ್ಲ, "ಎಂದು ಗಂಭೀರ್ ಸ್ಪೋರ್ಟ್ಸ್ ಕ್ರೀಡಾಗೆ ಉಲ್ಲೇಖಿಸಿದ್ದಾರೆ.
'' ನಾನು ಆಡಿದ ತಂಡಗಳಲ್ಲಿ ಪ್ರತಿಯೊಬ್ಬರು ನನ್ನ ಸ್ನೇಹಿತರಾಗಿರಲಿಲ್ಲ. ಹೀಗಂತ ನನ್ನ ಆಟಕ್ಕೆ ಇದು ತಡೆಯೊಡ್ಡಿಲ್ಲ, ತನ್ನ ಬೆಸ್ಟ್ ಅನ್ನು ಆನ್‌ಫೀಲ್ಡ್‌ನಲ್ಲಿ ನೀಡಿದ್ದೇನೆ. ಅವರಿಬ್ಬರು ವೃತ್ತಿಪರ ಕ್ರಿಕೆಟಿಗರಾಗಿದ್ದು, ಲಕ್ನೋಗೆ ಪಂದ್ಯ ಗೆಲ್ಲಿಸಲು ಶ್ರಮಿಸುವರು'' ಎಂದು ಗಂಭೀರ್ ಹೇಳಿದ್ದಾರೆ.
ಗಮನಾರ್ಹ ವಿಚಾರ ಅಂದ್ರೆ ಕಳೆದ ಸೀಸನ್‌ನಲ್ಲಿ ದೀಪಕ್ ಹೂಡ ಪಂಜಾಬ್ ಕಿಂಗ್ಸ್ ಪರ ಕೆ.ಎಲ್ ರಾಹುಲ್ ನಾಯಕತ್ವದಲ್ಲೇ ಆಡಿದ್ದರು. ಮತ್ತೊಂದೆಡೆ ಕೃನಾಲ್ ಪಾಂಡ್ಯ ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಇಬ್ಬರು ಆಲ್‌ರೌಂಡರ್‌ಗಳು ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಈ ಇಬ್ಬರು ಆಲ್‌ರೌಂಡರ್‌ಗಳಷ್ಟೇ ಅಲ್ಲದೆ ಕೀ ಪ್ಲೇಯರ್ ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೋಯ್ನಿಸ್ ಸ್ಕ್ವಾಡ್‌ನಲ್ಲಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಲ ಹೆಚ್ಚಿಸಿದೆ.