
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಸಲು ಪಾಕ್ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ತನ್ನ ನಿರ್ಧಾರವನ್ನು ಪಿಸಿಬಿ ಅಧಿಕೃತವಾಗಿ ಪ್ರಕಟಿಸಿದೆ.
ಯೂನಿಸ್ ಖಾನ್‌ಗೆ ಪಾಕ್ ತಂಡದ ಕೋಚ್ ಹುದ್ದುಗೆ ಸುದೀರ್ಘ ಆವಕಾಶವನ್ನು ಪಾಕ್ ಮಂಡಳಿ ನೀಡಿದೆ. 2022ರ ಟಿ20 ವಿಶ್ವಕಪ್‌ವರೆಗೆ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಸುವ ನಿರ್ಧಾರವನ್ನು ತಿಳಿಸಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‌ವರೆಗೆ ಯೂನಿಸ್ ಖಾನ್ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಯೂನಿಸ್ ಖಾನ್ ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಅವರನ್ನು ಮುಂದಿನ ನ್ಯೂಜಿಲೆಂಡ್ ವಿರುದ್ದದ ಸರಣಿಯವರೆಗೂ ಮುಂದುವರಿಸಲು ನಿರ್ಧಾರವನ್ನು ಈ ಹೆಂದೆಯೇ ತೆಗದುಕೊಳ್ಳಲಾಗಿತ್ತು. ಇದೀಗ 2022ರ ವರೆಗೂ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.
"ದೀರ್ಘ ಕಾಲದ ಅವಧಿಗೆ ಪಾಕ್ ತಂಡದ ಭಾಗವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ಕಳೆದ ಬೇಸಿಗೆಯಲ್ಲಿ ಮೊದಲಿಗೆ ಈ ಜವಾಬ್ಧಾರಿ ನನಗೆ ಬಂದಾಗ ತುಂಬಾ ಸಂತಸಪಟ್ಟಿದ್ದೆ. ಈ ಸಂದರ್ಭದಲ್ಲಿ ಸಾಕಷ್ಟು ಸುಂದರ ಅನುಭವ ಪಡೆದಿದ್ದೇನೆ. ಇದೀಗ ಅದೇ ತಂಡದೊಂದಿಗೆ ಮುಂದುವರಿಯುವುದಕ್ಕೆ ಸಂತಸಗೊಂಡಿದ್ದೇನೆ" ಎಂದು ಯೂನಿಸ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
34 ಟೆಸ್ಟ್ ಶತಕಗಳನ್ನು ಬಾರಿಸಿ ಪಾಕ್ ಪರ ಅತಿ ಹೆಚ್ಚು ಟೆಸ್ಟ್ ಶತಕ ಗಳಿಸಿದ ಸಾಧನೆ ಮಾಡಿರುವ ಯೂನಿಸ್ ಖಾನ್ 118 ಟೆಸ್ಟ್ ಪಂದ್ಯಗಳಲ್ಲಿ 10,099 ರನ್ ಗಳಿಸಿದ್ದಾರೆ. 265 ಏಕದಿನ ಪಂದ್ಯಗಳಲ್ಲಿ 7249 ರನ್ ಗಳಿಸಿದ್ದಾರೆ. 25 ಟಿ20 ಪಂದ್ಯಗಳಲ್ಲಿ 442 ರನ್ ಗಳಿಸಿದ್ದಾರೆ.