ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಎರಡೂವರೆ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಇನ್ನು ಅಕ್ಟೋಬರ್ 8ರಂದು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದರೆ, ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ನಿಗದಿಯಾಗಿದೆ.
ಆದರೆ, ಇದೀಗ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡವು ಪ್ರಯಾಣಿಸಲಿದೆಯೇ ಎಂಬುದು ದೊಡ್ಡ ಚರ್ಚೆಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಂಗಾಮಿ ಅಧ್ಯಕ್ಷ ಝಕಾ ಅಶ್ರಫ್ ಅವರು ಈ ವಾರ ಡರ್ಬನ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ತಟಸ್ಥ ಸ್ಥಳಗಳಲ್ಲಿ ಪಾಕಿಸ್ತಾನ ತಂಡದ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಒತ್ತಾಯಿಸಲಿದ್ದಾರೆ ಎಂದು ಅಂತರ-ಪ್ರಾಂತೀಯ ಸಮನ್ವಯ (ಕ್ರೀಡಾ) ಸಚಿವ ಅಹ್ಸಾನ್ ಮಜಾರಿ ಹೇಳಿದ್ದಾರೆ.
"2023ರ ಏಷ್ಯಾ ಕಪ್‌ಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಿಲ್ಲದಿದ್ದರೆ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಏಕೆ ಆಡಬಾರದು ಎಂಬ ವಿಷಯವನ್ನು ಝಕಾ ಅಶ್ರಫ್ ಪ್ರಸ್ತಾಪಿಸುತ್ತಾರೆ," ಎಂದು ಅಹ್ಸಾನ್ ಮಜಾರಿ ತಿಳಿಸಿದರು.
ಗಡಿ ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ತನ್ನ ಏಷ್ಯಾ ಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಗಸ್ಟ್ 31 ರಿಂದ ಸೆಪ್ಟೆಂಬರ್ 17ರವರೆಗೆ ನಡೆಯುವ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯ ಮತ್ತು ಶ್ರೀಲಂಕಾದಲ್ಲಿ ಒಂಬತ್ತು ಪಂದ್ಯಗಳನ್ನು ಆಡಿಸಲಾಗುತ್ತಿದೆ.
ಆದರೂ, ಉಭಯ ದೇಶಗಳ ನಡುವಿನ ಹಳಸಿದ ಸಂಬಂಧಗಳ ಕಾರಣದಿಂದ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆ ಪಾಕಿಸ್ತಾನ ಸರ್ಕಾರದ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಪಿಸಿಬಿ ಇತ್ತೀಚೆಗೆ ಐಸಿಸಿ ಮತ್ತು ಬಿಸಿಸಿಐಗೆ ತಿಳಿಸಿತ್ತು.
ಝಕಾ ಅಶ್ರಫ್ ಮತ್ತು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ತಸೀರ್ ಅವರು ಐಸಿಸಿ ಸಭೆಗಳಲ್ಲಿ ಪಾಲ್ಗೊಳ್ಳಲು ಡರ್ಬನ್‌ಗೆ ತೆರಳಿದ್ದಾರೆ. ಅಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ.
ಅಹ್ಸಾನ್ ಮಜಾರಿ ಅವರ ಪ್ರಕಾರ, ಪಾಕಿಸ್ತಾನ ರಾಷ್ಟ್ರೀಯ ತಂಡವು ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಬೇಕೆ ಎಂದು ಶಿಫಾರಸು ಮಾಡಲು ಪ್ರಧಾನಿ ಶೆಹಬಾಜ್ ಷರೀಫ್ ಅವರು ರಚಿಸಿರುವ ವಿಶೇಷ ಸಮಿತಿಯ ಇತರ ಕೆಲವು ಸದಸ್ಯರು ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಎಂದು ಭಾವಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡ ಭಾಗವಹಿಸುವ ಕುರಿತು ನಿರ್ಧರಿಸಲು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದಲ್ಲಿ ಶೆಹಬಾಜ್ ಷರೀಫ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು.
"ಭಾರತ ತನ್ನ ತಂಡವನ್ನು ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಕಳುಹಿಸಲು ಬಯಸದಿದ್ದರೆ, ತಟಸ್ಥ ಸ್ಥಳಗಳಲ್ಲಿ ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳನ್ನು ಆಡಿಸಲು ನಾನು ಬಯಸುತ್ತೇನೆ. ಬಿಸಿಸಿಐ ಪ್ರಕಾರ ಅವರಿಗೆ ಪಾಕಿಸ್ತಾನದಲ್ಲಿ ಭದ್ರತಾ ಸಮಸ್ಯೆಗಳಿದ್ದರೆ, ನಾವು ಭಾರತದ ಭದ್ರತಾ ಪರಿಸ್ಥಿತಿಯನ್ನು ಸಹ ಪ್ರಶ್ನಿಸಬಹುದು," ಎಂದು ಕ್ರೀಡಾ ಸಚಿವ ಅಹ್ಸಾನ್ ಮಜಾರಿ ಹೇಳಿದರು.
ಝಕಾ ಅಶ್ರಫ್ ಅವರನ್ನು ಪಿಸಿಬಿ ವ್ಯವಹಾರಗಳನ್ನು ನಡೆಸಲು ಸರ್ಕಾರವು ಹೊಸ ಕ್ರಿಕೆಟ್ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೊದಲು, ಪಿಸಿಬಿ ಹಿಂದಿನ ನಜಮ್ ಸೇಥಿ ಅವರು ಬಿಸಿಸಿಐ ಸೇರಿದಂತೆ ಎಸಿಸಿ ಸದಸ್ಯರೊಂದಿಗೆ ಒಪ್ಪಂದದ ಮಾತುಕತೆ ನಡೆಸಿದ್ದರು.
ಪಾಕಿಸ್ತಾನಕ್ಕೆ 4-5 ಏಷ್ಯಾ ಕಪ್ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಬೇಕು ಮತ್ತು ಹೈಬ್ರಿಡ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳನ್ನು ನಡೆಸಬಹುದು ಎಂದು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಎಸಿಸಿ ಒಪ್ಪಿಗೆ ಸೂಚಿಸಿತ್ತು.