
ಮುಂಬರುವ ಫಿಫಾ ವಿಶ್ವಕಪ್ ಕತಾರ್ -2022 ಪಂದ್ಯಗಳನ್ನು ನೇರಪ್ರಸಾರ ಮಾಡುವ ವೇಳೆ ಪ್ರಾದೇಶಿಕ ವೀಕ್ಷಕ ವಿವರಣೆ ತಂಡದಲ್ಲಿ ಕಾರ್ಯನಿರ್ವಹಿಸಲಿರುವ ದೇಶೀಯ ಫುಟ್ಬಾಲ್ ಸ್ಟಾರ್ಗಳ ಪಟ್ಟಿಯನ್ನು ಭಾರತದ ಹೊಚ್ಚಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ 'ವಯಾಕಾಮ್18 ಸ್ಪೋರ್ಟ್ಸ್' ಪ್ರಕಟಿಸಿದೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಕ್ರೀಡಾಕೂಟ ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಒಳಗೊಂಡಂತೆ 5 ಭಾಷೆಗಳಲ್ಲಿ ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿದೆ. ಜಿಯೋ ಸಿನಿಮಾ ಈಗ ಜಿಯೋ, ವಿ, ಏರ್ಟೆಲ್ ಮತ್ತು ಬಿಎಸ್ಎನ್ಎಲ್ ಸಬ್ಸ್ಕ್ರೈಬರ್ಗಳಿಗೆ ಲಭ್ಯವಿದೆ.
ಫಿಫಾ ವಿಶ್ವಕಪ್ ಕತಾರ್-2022ಕ್ಕೆ ನವೆಂಬರ್ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಚಾಲನೆ ಸಿಗಲಿದೆ. ಡಿಸೆಂಬರ್ 18ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತದ ಫುಟ್ಬಾಲ್ ಪ್ರೇಮಿಗಳು ಸ್ಪೋರ್ಟ್ಸ್18 - 1 ಎಸ್ಡಿ ಮತ್ತು ಎಚ್ಡಿ ಟಿವಿ ಚಾನೆಲ್ಗಳ ಮೂಲಕವೂ ಫಿಫಾ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಡೆಂಪೋ ಎಸ್ಸಿಯ ಸಿಇಒ ಮತ್ತು ಮಾಜಿ ಕೋಚ್ ಪ್ರಧ್ಯುಮ್ ರೆಡ್ಡಿ ಹಾಗೂ ಬ್ರೆಜಿಲ್ ಫುಟ್ಬಾಲ್ ಆಟಗಾರ ಜೋಸ್ ರಮಿರೇಜ್ ಬ್ಯಾರೆಟೊ ಅವರು ಇಂಗ್ಲಿಷ್ ಎಕ್ಸ್ಪರ್ಟ್ ಪ್ಯಾನೆಲ್ನಲ್ಲಿ ಇರಲಿದ್ದಾರೆ. ಭಾರತದ ಫುಟ್ಬಾಲ್ ಆಟಗಾರ ರಾಬಿನ್ ಸಿಂಗ್, ಭಾರತ ಮಹಿಳಾ ರಾಷ್ಟ್ರೀಯ ತಂಡದ ಹಾಲಿ ಗೋಲ್ ಕೀಪರ್ ಅದಿತಿ ಚೌಹಾಣ್, ಕೇರಳ ಬ್ಲಾಸ್ಟರ್ಸ್ ಎಫ್ಸಿ ತಂಡದ ಸಹಾಯಕ ಕೋಚ್ ಇಶ್ಫಾಕ್ ಅಹ್ಮದ್ ಮತ್ತು ಮಾಜಿ ಆಟಗಾರ ಕರಣ್ ಸಾವ್ನೆ ಅವರು ಹಿಂದಿ ಭಾಷೆಯ ಪ್ಯಾನೆಲ್ನಲ್ಲಿ ಇರಲಿದ್ದಾರೆ.
ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ನೀವು ತಿಳಿದುಕೊಂಡಿರಬೇಕಾದ ಪ್ರಮುಖ ಮಾಹಿತಿಗಳು
ಫಿಫಾ ವಿಶ್ವಕಪ್ ಕತಾರ್-2022 ಅನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಾದೇಶಿಕ ಸ್ವರೂಪದಲ್ಲಿ ಪ್ರಸ್ತುತ ಪಡಿಸುವುದು ನಮ್ಮ ಧ್ಯೇಯವಾಗಿದೆ. ಜಿಯೋ ಸಿನಿಮಾದಲ್ಲಿ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ತಜ್ಞರ ದೃಷ್ಟಿಕೋನದಲ್ಲಿ ಫುಟ್ಬಾಲ್ ಲೈವ್ ಒದಗಿಸಲಿದ್ದೇವೆ. ದೇಶದ ಎಲ್ಲ ಭಾಗದ ವೀಕ್ಷಕರಿಗೆ ಟೂರ್ನಿಯ ಅತ್ಯುತ್ತಮ ಅನುಭವ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ವಯಾಕಾಮ್18 ಸ್ಪೋರ್ಟ್ಸ್ನ ಕಂಟೆಂಟ್ ಮುಖ್ಯಸ್ಥ ಸಿದ್ಧಾರ್ಥ್ ಶರ್ಮ ಹೇಳಿದ್ದಾರೆ.
ಭಾರತ ಪುರುಷರ ಫುಟ್ಬಾಲ್ ತಂಡದ ಮಾಜಿ ಗೋಲ್ ಕೀಪರ್ ಸುಬ್ರತಾ ಪೌಲ್ ಮತ್ತು ಮಾಜಿ ಆಟಗಾರರಾದ ಮೆಹ್ತಾಬ್ ಹುಸೇನ್, ಅಲ್ವಿಟೊ ಡಿಕುನ್ಹಾ, ಶಿಲ್ಟನ್ ಪೌಲ್ ಮತ್ತು ಮನಾಸ್ ಭಟ್ಟಾಚಾರ್ಯ ಅವರು ಬೆಂಗಾಲಿ ಭಾಷೆಯಲ್ಲಿ ವೀಕ್ಷಕರಿಗೆ ವಿವರಣೆಗಳನ್ನು ಒದಗಿಸಲಿದ್ದಾರೆ.
ಇನ್ನು ತಮಿಳು ವೀಕ್ಷಕರು ಭಾರತದ ಮಾಜಿ ಆಟಗಾರ ಹಾಗೂ ಜನಪ್ರಿಯ ವೀಕ್ಷಕ ವಿವರಣೆಕಾರರಾದ ರಮಣ್ ವಿಜಯನ್ ಅವರೊಂದಿಗೆ ನಲ್ಲಪನ್ ಮೋಹನ್ರಾಜ್, ಧರ್ಮರಾಜ್ ರಾವಣನ್ ಮತ್ತು ವಿಜಯಕಾರ್ತಿಕೇಯನ್ ಧ್ವನಿಯನ್ನು ಆನಂದಿಸಬಹುದಾಗಿದೆ. ಭಾರತ ತಂಡದ ಮಾಜಿ-ಹಾಲಿ ಆಟಗಾರರಾದ ಜೋ ಪೌಲ್, ಅಂಚೆರಿ, ಕೆಸಿ ವಿನೀತ್, ಮೊಹಮ್ಮದ್ ರಫಿ, ರಿನೋ ಆಂಟೊ, ಸುಶಾಂತ್ ಮ್ಯಾಥ್ಯೂ ಮತ್ತು ಫಿರೋಜ್ ಶೆರಿಫ್ ಅವರು ಮಲಯಾಳಂ ಭಾಷೆಯಲ್ಲಿ ಪಂದ್ಯದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಜಾಗತಿಕ ಫುಟ್ಬಾಲ್ ತಾರೆಯರಾದ ವೇಯ್ನ್ ರೂನಿ, , ಲೂಯಿಸ್ ಫಿಗೊ, ರಾಬರ್ಟ್ ಪೈರ್ಸ್, ಸೋಲ್ ಕ್ಯಾಂಪ್ಬೆಲ್ ಮತ್ತು ಗಿಲ್ಬರ್ಟೊ ಸಿಲ್ವಾ ಒಳಗೊಂಡ ತಂಡವೂ ವೀಸಾ ಮ್ಯಾಚ್ ಸೆಂಟರ್ ಲೈವ್ನಲ್ಲಿ ವಿಶ್ಲೇಷಣೆಯನ್ನು ಒದಗಿಸುವ ಜತೆಗೆ ಇಂಗ್ಲಿಷ್ ವೀಕ್ಷಕವಿವರಣೆಯನ್ನೂ ನೀಡಲಿದೆ.
ಫಿಫಾ ವಿಶ್ವಕಪ್ ಕತಾರ್-2022ಕ್ಕೆ ನವೆಂಬರ್ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಚಾಲನೆ ಸಿಗಲಿದೆ.