

ಮಾಸ್ಕೋ, ಜುಲೈ 12: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವಿನ ಫೀಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ 2-1 ಅಂತರದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿದೆ. ಹೆಚ್ಚುವರಿ ಕಾಲಾವಧಿಯಲ್ಲಿ ಗೋಲ್ ಬಾರಿಸಿದ ಕ್ರೊವೇಷಿಯಾ ಗೆಲುವಿನ ಸಂಭ್ರಮಾಚರಿಸಿತು.
ಪಂದ್ಯದ ಸಾಮಾನ್ಯ ಕಾಲಾವಧಿಯಲ್ಲಿ ಇತ್ತಂಡಗಳು 1-1ರ ಸಮಬಲ ಸಾಧಿಸಿದ್ದವು. ಹಾಗಾಗಿ ಹೆಚ್ಚುವರಿ ಕಾಲಾವಕಾಶ ನೀಡಲಾಯಿತು. ಆಗ ಕ್ರೊವೇಷಿಯಾದ ಮಾರಿಯೋ ಮ್ಯಾಂಜುಕಿಕ್ ಅವರು 109ನೇ ನಿಮಿಷದಲ್ಲಿ ಗೋಲ್ ಸಿಡಿಸಿದ್ದು ತಂಡದ ಗೆಲುವನ್ನು ಬರೆಯಿತು.
ಪಂದ್ಯಾರಂಭದಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಇಂಗ್ಲೆಂಡ್ ಕೀರನ್ ಟ್ರಿಪ್ರಿಯರ್ ಅವರು 5 ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆದರೆ 68ನೇ ನಿಮಿಷದಲ್ಲಿ ಕ್ರೊವೇಷಿಯಾದ ಇವಾನ್ ಪೆರಿಸಿವಿಚ್ ಗೋಲ್ ಸಿಡಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು.
ಅನಂತರ ಪಂದ್ಯದ ಸಾಮಾನ್ಯ ಕಾಲಾವಧಿ ಮುಕ್ತಾಯದವರೆಗೂ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ. ಹೀಗಾಗಿ ಹೆಚ್ಚುವರಿ ಕಾಲಾವಕಾಶ ನೀಡಲಾಯ್ತು. ಆಗ ಕ್ರೊವೇಷಿಯಾದ ಮಾರಿಯೋ ಮ್ಯಾಂಜುಕಿಕ್ ಅವರು ಗೋಲ್ ಬಾರಿಸಿ ಇಂಗ್ಲೆಂಡ್ ಗೆ ಆಘಾತವನ್ನಿತ್ತರು.