
ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 49ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ತಮಿಳ್ ತಲೈವಾಸ್ 49-39 ಪಾಯಿಂಟ್ಸ್ ಅಂತರದಲ್ಲಿ ಗೆದ್ದು ಬೀಗಿದೆ.
ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ತಮಿಳ್ ತಲೈವಾಸ್ ಅಬ್ಬರದ ಆಟವಾಡುವ ಮೂಲಕ ಎದುರಾಳಿ ವಿರುದ್ಧ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಮಿಂಚಿತು. ವಿರಾಮಕ್ಕೂ ಮುನ್ನ ತಮಿಳ್ ತಲೈವಾಸ್ 32-11 ಪಾಯಿಂಟ್ಸ್ ಅಂತರದಲ್ಲಿ ಮುನ್ನಡೆ ಸಾಧಿಸಿತು.
ಆದ್ರೆ ದ್ವಿತಿಯಾರ್ಧದಲ್ಲಿ 19 ರೈಡಿಂಗ್ ಪಾಯಿಂಟ್ಸ್ ಜೊತೆಗೆ 28 ಪಾಯಿಂಟ್ಸ್ ಕಲೆಹಾಕಿದ ದಬಾಂಗ್ ಡೆಲ್ಲಿ ಅದ್ಭುತ ಕಂಬ್ಯಾಕ್ ಮಾಡಿತ್ತಾದ್ರೂ, ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ ಭಾರೀ ಮನ್ನಡೆ ಕಾಯ್ದುಕೊಂಡಿತ್ತು. ಹೀಗಾಗಿ ಅಂತಿಮವಾಗಿ 10 ಪಾಯಿಂಟ್ಸ್ ಅಂತರದಲ್ಲಿ ದಬಾಂಗ್ ಡೆಲ್ಲಿ ಸೋಲನ್ನ ಅನುಭವಿಸಿದೆ.
ತಮಿಳ್ ತಲೈವಾಸ್ ತಂಡದ ಪರ ರೈಡಿಂಗ್‌ನಲ್ಲಿ ಮಿಂಚಿದ ನರೇಂದರ್ ಬರೋಬ್ಬರಿ 24 ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಅಜಿಂಕ್ಯಾ ಪವಾರ್ 6, ಹಿಮಾಂಶು 5 ಪಾಯಿಂಟ್ ತಮ್ಮದಾಗಿಸಿಕೊಂಡರು.
ಇನ್ನು ದಬಾಂಗ್ ಡೆಲ್ಲಿ ಪರ ಆಶು ಮಲ್ಲಿಕ್ 14, ಆಶಿಶ್ ನರ್ವಾಲ್ 5, ಮಂಜಿತ್ 4 ಪಾಯಿಂಟ್ಸ್ ತನ್ನ ತೆಕ್ಕೆಗೆ ಹಾಕಿಕೊಂಡರು.
ಈ ಗೆಲುವಿನ ಮೂಲಕ ತಮಿಳ್ ತಲೈವಾಸ್ 8 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿದ್ದು 20 ಪಾಯಿಂಟ್ಸ್ ಮೂಲಕ 8 ಸ್ಥಾನ ಅಲಂಕರಿಸಿದೆ. ಪಂದ್ಯ ಸೋತ ದಬಾಂಗ್ ಡೆಲ್ಲಿ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಪಂದ್ಯ ಸೋಲಿನ ಮೂಲಕ 28 ಪಾಯಿಂಟ್ಸ್ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ನಮ್ಮ ಬೆಂಗಳೂರು ಬುಲ್ಸ್ 34 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ