ಪ್ರೋ ಕಬಡ್ಡಿ ಲೀಗ್ 8: 10 ಪಂದ್ಯಗಳು ಮುಗಿದರೂ ಒಂದೇ ಒಂದು ಗೆಲುವನ್ನೂ ಕಾಣದೇ ಮಂಕಾದ ತಂಡವಿದು

ಸದ್ಯ ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು ( ಜನವರಿ 17 ) ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 60 ಹಾಗೂ 61ನೇ ಪಂದ್ಯಗಳು ನಡೆದಿವೆ. ಇಂದು ನಡೆದ ಪ್ರಥಮ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಪುಣೇರಿ ಪಲ್ಟಾನ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಸೆಣಸಾಟ ನಡೆಸಿದವು.
ಇಂದು ನಡೆದ ಯುಪಿ ಯೋಧಾ ಮತ್ತು ಪುಣೇರಿ ಪಲ್ಟಾನ್ ನಡುವಿನ ಪಂದ್ಯದಲ್ಲಿ ಯುಪಿ ಯೋಧಾ ಪುಣೇರಿ ಪಲ್ಟಾನ್ ವಿರುದ್ಧ 50 - 40 ಅಂಕಗಳ ಅಂತರದಲ್ಲಿ ಗೆದ್ದು ಬೀಗಿದೆ. ಅತ್ತ ದ್ವಿತೀಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದ ತೆಲುಗು ಟೈಟಾನ್ಸ್ ಟೂರ್ನಿಯಲ್ಲಿನ ತನ್ನ ಎಂಟನೇ ಸೋಲನ್ನು ಕಂಡಿದೆ. ಹೌದು, ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಈ ಪಂದ್ಯವನ್ನು ಸೇರಿ ತೆಲುಗು ಟೈಟಾನ್ಸ್ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 8 ಪಂದ್ಯಗಳಲ್ಲಿ ಸೋತು, 2 ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಾಲ್ ವಾರಿಯರ್ಸ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 28 - 27 ಅಂಕಗಳ ಅಂತರದಿಂದ ಸೋಲಿಸಿದೆ.
ವಿವೋ ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ 61ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತೆಲುಗು ಟೈಟಾನ್ಸ್ ತಂಡ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಪಂದ್ಯದ ಅಂತಿಮ ಹಂತದವರೆಗೂ ಕೂಡ ತೀವ್ರ ಪೈಪೋಟಿಯನ್ನು ನಡೆಸಿ ಕೊನೆಗೆ ಕೇವಲ ಒಂದೇ ಒಂದು ಅಂಕದ ಅಂತರದಿಂದ ಸೋಲನುಭವಿಸಿತು. ಹಾಲಿ ಚಾಂಪಿಯನ್ಸ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಸಿಂಗ್ ಸೂಪರ್ 10 ಗಳಿಸುವುದರ ಮೂಲಕ ಮಿಂಚಿದರೆ, ತಂಡದ ಡಿಫೆಂಡರ್ಸ್ ತಂಡಕ್ಕೆ ಅಂತಿಮ ಹಂತದಲ್ಲಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅತ್ತ ಪಂದ್ಯದುದ್ದಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಸಿದ ತೆಲುಗು ಟೈಟಾನ್ಸ್ ಕೊನೆಗೂ ಗೆಲುವಿನ ಖಾತೆ ತೆರೆಯಲಾಗದೇ ಮತ್ತೊಮ್ಮೆ ವಿಫಲವಾಯಿತು. ತೆಲುಗು ಟೈಟಾನ್ಸ್ ತಂಡದ ಪರ ರೈಡರ್ ರಜನೀಶ್ ಸೂಪರ್ 10 ( 11 ಅಂಕಗಳು ) ಕಲೆ ಹಾಕಿದರು.
ಇತ್ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಧ್ಯಂತರಕ್ಕೆ ತೆಲುಗು ಟೈಟನ್ಸ್ 13 ಅಂಕ ಗಳಿಸಿದರೆ ಬೆಂಗಾಲ್ ವಾರಿಯರ್ಸ್ 14 ಅಂಕಗಳನ್ನು ಪಡೆದುಕೊಂಡು 1 ಅಂಕದ ಮುನ್ನಡೆಯನ್ನು ಸಾಧಿಸಿತ್ತು. ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡದ ರಜನೀಶ್ ಮಾಡಿದ 3 ಅಂಕಗಳ ರೈಟ್ ತಂಡಕ್ಕೆ 4 ಅಂಕಗಳ ಮುನ್ನಡೆಯನ್ನು ತಂದುಕೊಟ್ಟಿತ್ತು. ಹೀಗೆ ಮುನ್ನಡೆಯನ್ನು ಸಾಧಿಸಿದ್ದ ತೆಲುಗು ಟೈಟಾನ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡ ಕಟ್ಟಿ ಹಾಕಿತು. ಪಂದ್ಯ ಮುಕ್ತಾಯವಾಗುವುದಕ್ಕೆ 2 ನಿಮಿಷಗಳು ಬಾಕಿ ಇದ್ದಾಗ ತೆಲುಗು ಟೈಟಾನ್ಸ್ ತಂಡದ ರಜನೀಶ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡದ ರಣ್ ಸಿಂಗ್ ಟ್ಯಾಕಲ್ ಮಾಡಿದರು. ಈ ಮೂಲಕ ತೆಲುಗು ಟೈಟಾನ್ಸ್ ಆಲ್ ಔಟ್ ಆಗಿ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಸೋಲನ್ನು ಅನುಭವಿಸಿತು.
ಈ ಗೆಲುವಿನ ಮೂಲಕ ಟೂರ್ನಿಯಲ್ಲಿನ ತನ್ನ ಐದನೇ ಗೆಲುವನ್ನು ಸಾಧಿಸಿದ ಬೆಂಗಾಲ್ ವಾರಿಯರ್ಸ್ ತಂಡ ಒಟ್ಟು 30 ಅಂಕಗಳನ್ನು ಕಲೆಹಾಕಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications