Asian Games 2023: ಒಂದೇ ದಿನ ದಾಖಲೆಯ 15 ಪದಕ; ಅರ್ಧಶತಕ ಬಾರಿಸಿದ ಭಾರತ
ಭಾನುವಾರ, ಅಕ್ಟೋಬರ್ 1ರಂದು ನಡೆದ 2023ರ ಏಷ್ಯನ್ ಗೇಮ್ಸ್‌ನಲ್ಲಿ 15 ಪದಕಗಳನ್ನು ಗೆದ್ದು ಭಾರತ ವಿಜೃಂಭಿಸಿದೆ. ಈ ಮೂಲಕ ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಆಟಗಾರರು ಬೃಹತ್ ದಾಖಲೆ ನಿರ್ಮಿಸಿದರು.
ಈ ಮೊದಲು 2010ರ ಏಷ್ಯನ್ ಗೇಮ್ಸ್‌ನ 14ನೇ ದಿನದಲ್ಲಿ ಭಾರತೀಯ ಕ್ರೀಡಾಳುಗಳು ಒಂದೇ ದಿನ 11 ಪದಕ ಗೆದ್ದಿದ್ದರು. ಇದೀಗ ಹಿಂದಿನ ದಾಖಲೆಯನ್ನು ಮೀರಿಸಿದ್ದಾರೆ.

ಚೀನಾದಲ್ಲಿ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇನ್ನು ಭಾನುವಾರ ಭಾರತದ ಸ್ಪರ್ಧಿಗಳು ಒಂದೇ ದಿನದಲ್ಲಿ 15 ಪದಗಳನ್ನು ಗೆದ್ದು ಸಾಧನೆ ಮಾಡುವ ಮೂಲಕ 50 ಪದಕಗಳ ಗಡಿಯನ್ನು ದಾಟಿದ್ದಾರೆ.
ಈ ಬಾರಿಯ ಏಷ್ಯನ್ ಗೇಮ್ಸ್‌ನ ಟೂರ್ನಿಯ ಎಂಟನೇ ದಿನ ಪೂರ್ಣಗೊಂಡಾಗ ಭಾರತ ಈವರೆಗೆ ಒಟ್ಟಾರೆ 53 ಪದಕಗಳನ್ನು ಬಾಚಿಕೊಂಡಿದ್ದು, ಪದಕಗಳ ಅರ್ಧಶತಕ ಬಾರಿಸಿದೆ. ಇದರಲ್ಲಿ ಅತಿ ಹೆಚ್ಚು ಬೆಳ್ಳಿ ಪದಕಗಳಿವೆ, ಎರಡನೇ ಸ್ಥಾನ ಕಂಚಿನ ಪದಕ ಮತ್ತು ಚಿನ್ನ ಮೂರನೇ ಸ್ಥಾನದಲ್ಲಿದೆ.

ಈವರೆಗೆ ಭಾರತ 13 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಆತಿಥೇಯ ಚೀನಾ ಒಟ್ಟಾರೆ 244 ಪದಕಗಳನ್ನು ಗೆದ್ದು ಮೊದನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಿಪಬ್ಲಿಕ್ ಆಫ್ ಕೊರಿಯಾ 125 ಪದಕ, ಜಪಾನ್ 112 ಪದಕ ಹಾಗೂ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಅಕ್ಟೋಬರ್ 1ರಂದು ಭಾರತದ ಪದಕ ಸಾಧನೆ
* ಭಾರತದ ಪುರುಷರ ಶೂಟಿಂಗ್ ತಂಡದ ಕಿನಾನ್ ಚೆನೈ, ಜೋರಾವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಂಡೈಮಾನ್ ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದರು.
* ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಅವಿನಾಶ್ ಸೇಬಲ್ 8:19.53 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಐತಿಹಾಸಿಕ ಚಿನ್ನದ ಪದಕ ಗೆದ್ದರು.
* ತಜಿಂದರ್‌ಪಾಲ್ ಸಿಂಗ್ ತೂರ್ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಅಂತಿಮ ಶಾಟ್‌ಪುಟ್ ಪ್ರಯತ್ನದಲ್ಲಿ 20.36 ಮೀ ಎಸೆದು ಸತತ ಎರಡನೇ ಚಿನ್ನದ ಪದಕವನ್ನು ಗೆದ್ದರು.
* ಕರ್ನಾಟಕದ ಅದಿತಿ ಅಶೋಕ್ ಏಷ್ಯನ್ ಗೇಮ್ಸ್‌ನ ಗಾಲ್ಫ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದರು.
* ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋಜ ಬೆಳ್ಳಿ ಪದಕವನ್ನು ಗೆದ್ದರು.
* ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ ಭಾರತದ ಮಹಿಳಾ ಶೂಟಿಂಗ್ ತಂಡದ ರಾಜೇಶ್ವರಿ ಕುಮಾರಿ, ಮನೀಶಾ ಖೀರ್ ಮತ್ತು ಪ್ರೀತಿ ರಜಾಕ್ ಮೂವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದುಕೊಂಡರು.
* ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಮೂರನೇ ಸ್ಥಾನ ಪಡೆದು, ನಂತರ ಬೆಳ್ಳಿ ಪದಕಕ್ಕೆ ಬಡ್ತಿ ಪಡೆದರು.
* ಮಹಿಳೆಯರ 1500 ಮೀಟರ್ ಓಟದಲ್ಲಿ ಹರ್ಮಿಲನ್ ಬೇನ್ಸ್ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಟ್ಟರು.
* ಲಾಂಗ್ ಜಂಪ್ ಫೈನಲ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಗೆದ್ದರು.
* 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
* ಜಿನ್ಸನ್ ಜಾನ್ಸನ್ ತಮ್ಮ ಪ್ರತಿಸ್ಪರ್ಧಿ ಅಜಯ್ ಕುಮಾರ್ ಅವರನ್ನು ಹಿಂದಿಕ್ಕಿ ಕಂಚಿನ ಪದಕ ಗೆದ್ದರು.
* ಮಹಿಳೆಯರ ಹೆಪ್ಟಾಥ್ಲಾನ್ ನಂದಿನಿ ಅಗಸರ ಕಂಚಿನ ಪದಕ ಗೆದ್ದುಕೊಂಡರು.
* ಸೀಮಾ ಪೂನಿಯಾ ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದರು.
* ಕಿನಾನ್ ಚೆನೈ ಪುರುಷರ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
* ಬಾಕ್ಸಿಂಗ್‌ನಲ್ಲಿ 50 ಕೆಜಿ ವಿಭಾಗದಲ್ಲಿ ನಿಖತ್ ಜರಿನ್ ಕಂಚಿನ ಪದಕ ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications