ಏಷ್ಯನ್ ಗೇಮ್ಸ್: ಶೂಟರ್ಸ್, ರಸ್ಲರ್ಸ್ ಮೇಲೆ ಹೆಚ್ಚಿನ ಪದಕ ಭರವಸೆ

ಜಕಾರ್ತಾ, ಆಗಸ್ಟ್ 17: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯಲಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಶೂಟಿಂಗ್ ಮತ್ತು ರಸ್ಲಿಂಗ್ ವಿಭಾಗದಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಭರವಸೆಯನ್ನು ಹೊಂದಿದೆ. ಎರಡೂ ವಿಭಾಗಗಳಲ್ಲಿನ ಯುವ ಸ್ಪರ್ಧಾಳುಗಳು ಹೆಚ್ಚಿನ ಉಮೇದಿನಲ್ಲಿದ್ದು, ಭಾರತಕ್ಕೆ ಹೆಚ್ಚಿನ ಪದಕ ಲಭಿಸುವ ನಿರೀಕ್ಷೆ ಮೂಡಿಸಿದೆ.
ಸುಮಾರು 36 ವಿವಿಧ ಕ್ರೀಡಾಸ್ಪರ್ಧೆಗಳಿಗಾಗಿ ಒಟ್ಟು 572 ಕ್ರೀಡಾಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಗಿಂತ ಈ ಬಾರಿ ಹೆಚ್ಚಿನ ಪದಕಗಳು ಭಾರತಕ್ಕೆ ಒಲಿಯಲಿರುವುದಂತೂ ಖಂಡಿತ. ಆದರೆ ಹೆಚ್ಚು ಪದಕಗಳನ್ನು ತರುವ ಕ್ರೀಡಾ ವಿಭಾಗಗಳಲ್ಲಿ ಶೂಟಿಂಗ್, ರಸ್ಲಿಂಗ್ ಮತ್ತು ಬ್ಯಾಡ್ಮಿಂಟನ್ ಮುಂಚೂಣಿಯಲ್ಲಿದೆ.
ಶೂಟಿಂಗ್ ಭರವಸೆಗಳು: ಶೂಟಿಂಗ್ ನಲ್ಲಿರುವ ಹೆಚ್ಚಿನ ಸ್ಪರ್ಧಿಗಳು ಕಿರಿಯರೆ. 15ರ ಹರೆಯದ ಅನೀಶ್ ಭಾನ್ವಾಲ್ 25 ಮೀ. ರ್ಯಾಪಿಡ್ ಏರ್ ಪಿಸ್ತೂಲ್ ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದರೆ ಮತ್ತೊಬ್ಬಳು ಹುಡುಗಿ ಮನು ಭಾಕರ್ (16 ವರ್ಷ) ಮಹಿಳಾ 10 ಮೀ. ಏರ್ ರೈಫಲ್ ನಲ್ಲಿ ಬಂಗಾರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 19ರ ಯುವತಿ ಎಲ್ವೆವಿಲ್ ವಲೇರಿವನ್ ಅವರೂ ಪದಕ ತರಬಲ್ಲರು.
ರಸ್ಲಿಂಗ್ ಕಲಿಗಳು: ಭಾರತದ ಕುಸ್ತಿ ವಿಭಾಗವೂ ಬಲಿಷ್ಟವಾಗಿದೆ. ಹೀಗಾಗಿ ಶೂಟಿಂಗ್ ವಿಭಾಗದೊಟ್ಟಿಗೆ ಭಾರತ ಪರ ಪದಕಕ್ಕಾಗಿ ಪ್ರಬಲ ಪೈಪೋಟಿ ನೀಡಬಲ್ಲ ಮತ್ತೊಂದು ವಿಭಾಗವಾಗಿ ರಸ್ಲಿಂಗ್ ಗಮನ ಸೆಳೆದಿದೆ. 2014ರ ಇಂಚಿಯಾನ್ ಗೇಮ್ಸ್ ನಲ್ಲಿ ಬೆಳ್ಳಿ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬಜರಂಗ್ ಪೂನಿಯಾ (65 ಕೆಜಿ), ಮಹಿಳಾ ವಿಭಾಗದಲ್ಲಿ ಗೋಲ್ಡ್ ಕೋಸ್ಟ್ ಗೇಮ್ಸ್ ಚಾಂಪಿಯನ್ ವಿನೇಶ್ ಪೋಗಟ್ (50 ಕೆಜಿ) ಕೂಡ ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಬಾಕ್ಸಿಂಗ್ ವಿಭಾಗವೂ ಚಿನ್ನ ಬಾಚಿಕೊಳ್ಳಬಲ್ಲದು: ಅರ್ಜೆಂಟೀನಾ ಮೂಲದ ಕೋಚ್ ಸ್ಯಾಂಟಿಯಾಗೊ ನಿವಾ ಅವರಿಂದ ಹೊಸ ವಿಧಾನದ ತರಬೇತಿ ದೊರೆತಿರುವುದರಿಂದ ಭಾರತದ ಬಾಕ್ಸಿಂಗ್ ಬಳಗ ಮತ್ತಷ್ಟು ಬಲಿಷ್ಟವಾಗಿದೆ. ವಿಕಾಸ್ ಕೃಷ್ಣನ್ (75 ಕೆಜಿ), ಶಿವ ತಾಪ (60 ಕೆಜಿ), ಸೋನಿಯಾ ಲಾದರ್ (57 ಕೆಜಿ) ಅವರು ಈ ವಿಭಾಗದಲ್ಲಿ ಪದಕ ತರುವ ಭರವಸೆಯ ಸ್ಪರ್ಧಿಗಳು.
ಕಳೆದ ಬಾರಿ ಸೌತ್ ಕೊರಿಯಾ ಇಂಚಿಯಾನ್ ಗೇಮ್ಸ್ ನಲ್ಲಿ ಭಾರತಕ್ಕೆ ಒಟ್ಟು 11 ಚಿನ್ನ, 9 ಬೆಳ್ಳಿ ಮತ್ತು 37 ಕಂಚಿನ ಪದಕ ಸೇರಿ ಒಟ್ಟು 57 ಪದಕಗಳು ಲಭಿಸಿದ್ದವು. ಈ ಬಾರಿ ಇದಕ್ಕೂ ಮಿಕ್ಕಿ ಪದಕಪಟ್ಟಿ ಬೆಳೆಯುವ ಸಾಧ್ಯತೆಯಿದೆ. ಕಳೆದ ಸಾರಿ ಏಷ್ಯನ್ ಗೇಮ್ಸ್ ಪದಕಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಲಭಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications