ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಭಾರತದ ಕ್ರೀಡಾಪಟುಗಳ ಅದ್ಭುತ ಸಾಧನೆ ಮುಂದುವರಿದಿದೆ. ಚೀನಾದ ಹ್ಯಾಂಗ್‌ಜೂನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಭಾರತದ ಪರವಾಗಿ ಹ್ಯಾನಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಎಫ್ 37/38 ವಿಭಾಗದಲ್ಲಿ ಹ್ಯಾನಿ ಈ ಸಾಧನೆ ಮಾಡಿದ್ದಾರೆ.
ಈ ಮೂಲಕ ಭಾರತ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 11ನೇ ಚಿನ್ನದ ಪದಕ ಗೆದ್ದುಕೊಂಡಂತಾಗಿದೆ. 55.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆತಯುವ ಮೂಲಕ ಅತ್ಯುತ್ತಮ ಸಾಧನೆಯೊಂದಿಗೆ ಹ್ಯಾನಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಭಾರತದ ಮತ್ತೊರ್ವ ಪ್ಯಾರಾ ಅಥ್ಲೀಟ್ ಬಾಬಿ 42.23 ದೂರಕ್ಕೆ ಎಸೆದು ಆರನೇ ಸ್ಥಾನವನ್ನು ಪಡೆದುಕೊಂಡರು.

ಇನ್ನು ಮಂಗಳವಾರ ಮಹಿಳೆಯರ 400 ಮೀಟರ್-ಟಿ20 ಓಟದಲ್ಲಿ ದೀಪ್ತಿ ಜೀವನಜಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟರು . ಹೊಸ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಭಾರತದ ದೀಪ್ತಿ ಜೀವನಜಿ 56.69 ಸೆಕೆಂಡ್‌ಗಳ ದಾಖಲೆಯ ಸಮಯದೊಂದಿಗೆ, ಥಾಯ್ಲೆಂಡ್‌ನ ಒರಾವನ್ ಕೈಸಿಂಗ್ ಅವರಿಗಿಂತ ಮೊದಲು ಅಗ್ರ ಪೋಡಿಯಂ ಫಿನಿಶ್ ಮಾಡಿದರು. ಇದು ಭಾರತದ 8ನೇ ಚಿನ್ನದ ಪದಕವಾಗಿತ್ತು.
ಥಾಯ್ಲೆಂಡ್ ಸ್ಪರ್ಧಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು 59.00 ಸೆಕೆಂಡ್‌ಗಳನ್ನು ನೀಡಿದರು ಮತ್ತು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪುರುಷರ 400 ಮೀ-ಟಿ64 ಫೈನಲ್‌ನಲ್ಲಿ ಭಾರತದ ಅಜಯ್ ಕುಮಾರ್ 54.85ರ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕ ಗೆದ್ದರು.
ಭಾರತದ ಮತ್ತೊಬ್ಬ ಸ್ಪರ್ಧಿ ಶರತ್ ಮಾಕನಹಳ್ಳಿ ಶಂಕರಪ್ಪ ಪುರುಷರ 5000 ಮೀ-ಟಿ13 ವಿಭಾಗದಲ್ಲಿ ಸ್ವರ್ಣ ಗೆದ್ದು ಭಾರತದ ಚಿನ್ನದ ಪದಕಗಳನ್ನು ಒಂಬತ್ತಕ್ಕೆ ಏರಿಸಿದರು. ಇದೇ ವೇಳೆ ಭಾರತದ ನೀರಜ್ ಯಾದವ್, ಯೋಗೇಶ್ ಕಥುನಿಯಾ ಮತ್ತು ಮುತ್ತುರಾಜ ಅವರು ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56 ರಲ್ಲಿ ಪದಕದ ವೇದಿಕೆಯನ್ನು ಪಡೆದರು. ಈ ಮೂಲಕ ಭಾರತವು 10 ಚಿನ್ನದ ಪದಕಗಳನ್ನು ಪಡೆದುಕೊಂಡಿತ್ತು. ಇದೀಗ ಹ್ಯಾನಿ 11ನೇ ಚಿನ್ನದ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ.