ರಾಷ್ಟ್ರೀಯ ವಿಂಟರ್ ಬಯಾಥ್ಲಾನ್‌ನಲ್ಲಿ ಚಿನ್ನ ಗೆದ್ದ ಕನ್ನಡತಿ ಭವಾನಿ

ಮಡಿಕೇರಿ: ಸ್ಕೀಯಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗಮನಸೆಳೆದಿರುವ ಕೊಡಗಿನ ಯುವತಿ ಟಿ.ಎನ್. ಭವಾನಿ ಇದೀಗ ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್-2022ರಲ್ಲಿ ಒಂದು ಚಿನ್ನದ ಪದಕ ಮತ್ತು ಎರಡು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿದ್ದು, ಈ ಕ್ರೀಡೆಯಲ್ಲಿ ದಕ್ಷಿಣ ಭಾರತದಿಂದ ಸ್ಪರ್ಧಿಸಿರುವ ಏಕೈಕ ಸ್ಪರ್ಧಿ ಭವಾನಿಯಾಗಿದ್ದಾರೆ. ಈಗಾಗಲೇ ಮಾರ್ಚ್ 19 ರಿಂದ 21ರವರೆಗೆ ನಡೆದ ಹತ್ತು ಮತ್ತು ಐದು ಕಿ.ಮೀ. ರೇಸ್ ನಲ್ಲಿ ಎರಡು ಬೆಳ್ಳಿಯ ಪದಕ ಪಡೆದಿದ್ದರೆ, ಮಾ. 23 ರಿಂದ 25ರವರೆಗೆ ನಡೆಯಲಿರುವ ನ್ಯಾಷನಲ್ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್‌ನಲ್ಲಿ ಚಿನ್ನದ ಪಡೆದಿದ್ದು ಎಲ್ಲರ ಗಮನಸೆಳೆದಿದ್ದಾರೆ.
ಚಿನ್ನ ಬೆಳ್ಳಿ ಪದಕ ಪಡೆದ ಕೊಡಗಿನ ಹುಡುಗಿ
ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಹುಟ್ಟಿದ ಭವಾನಿ ಅವರು ಸ್ಕೀಯಿಂಗ್‌ನ್ನು ಆಯ್ಕೆ ಮಾಡಿಕೊಂಡು ಬಳಿಕ ದೇಶ, ವಿದೇಶಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ಇದೀಗ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಇನ್ನು ವಿಂಟರ್ ಬಯಾಥ್ಲಾನ್ ಸ್ಪರ್ಧೆ ಹೇಗಿರುತ್ತದೆ ಎಂದರೆ ಹಿಮಚ್ಛಾದಿತ ಪರ್ವತದ ಕಡಿದಾದ ಪ್ರದೇಶದಲ್ಲಿ ಸ್ಕೀಯಿಂಗ್ ನ ಪರಿಕರಗೊಂದಿಗೆ ಸ್ಪರ್ಧಿಗಳು ಭಾಗವಹಿಸಬೇಕಾಗುತ್ತದೆ. ಮೂರೂವರೆ ಕೆಜಿ ತೂಕದ ರೈಫಲ್ ನೊಂದಿಗೆ ಜಾರುತ್ತಾ ನಿಗದಿತ ಗುರಿಯಲ್ಲಿ ಗುಂಡು ಹಾರಿಸಬೇಕು. ಯಾರು ಹೆಚ್ಚು ಗುರಿಯಿಟ್ಟು ಹೊಡೆಯುತ್ತಾ ಮುನ್ನಡೆಯುತ್ತಾರೋ ಅವರು ಗೆಲುವು ಪಡೆಯುತ್ತಾರೆ.
ತಲಾ ಐದು ಮತ್ತು ಹತ್ತು ಕಿ.ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದ ಭವಾನಿ ಹತ್ತರ ಪೈಕಿ ಏಳು, ಐದರ ಪೈಕಿ ಮೂರು ಗುರಿ ತಲುಪಿ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಮಾ.23ರಂದು ನಡೆದ ನ್ಯಾಷನಲ್ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್ ನಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಐಪಿಎಲ್‌ನಲ್ಲಿ ಭಾಗವಹಿಸಲಿರುವ ಈ ಮೂವರಲ್ಲೊಬ್ಬ ರೋಹಿತ್ ನಂತರ ಭಾರತದ ನಾಯಕ ಎಂದ ಶಾಸ್ತ್ರಿ!
ನಾರ್ವೆಯಲ್ಲಿ ಹೆಚ್ಚಿನ ತರಬೇತಿ
ಕಳೆದೊಂದು ತಿಂಗಳ ಹಿಂದೆಯಷ್ಟೆ ಟಿ.ಎನ್.ಭವಾನಿ ಯುರೋಪಿನ ನಾರ್ವೆಯಲ್ಲಿ ತರಬೇತಿ ಪಡೆದು ಬಂದಿದ್ದರು. ಹಿಮಚ್ಛಾದಿತ ಪರ್ವತ ಏರುವುದು, ಈಜು, ಕುದುರೆ ಸವಾರಿ ಹೀಗೆ ಹಲವು ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಭವಾನಿ ಈ ಹಿಂದೆ ಉತ್ತರಕಾಂಡ್ ಹಾಗೂ ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವುದರೊಂದಿಗೆ ದಕ್ಷಿಣಭಾರತವನ್ನು ಪ್ರತಿನಿಧಿಸಿದ ಮೊದಲ ಯುವತಿ ಎಂಬ ದಾಖಲೆ ಬರೆದಿದ್ದರು. ಇದೀಗ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಭವಾನಿಯ ಸಾಧನೆ ಬಗ್ಗೆ ನಾವು ನೋಡುತ್ತಾ ಹೋದರೆ ಸಾಧನೆಗಳ ಪಟ್ಟಿಯೂ ದೊಡ್ಡದಾಗುತ್ತಾ ಹೋಗುತ್ತದೆ. 2018ರಲ್ಲಿ ಯೂರೋಪ್ ದೇಶಗಳ ಪೈಕಿ ಅತೀ ಎತ್ತರದ ಪರ್ವತವಾದ ರಷ್ಯಾದ ಹಿಮಚ್ಚಾದಿತ ಪರ್ವತ ಎಲ್ ಬ್ರಸ್‌ನ್ನು ನಿರಂತರವಾಗಿ ಸುಮಾರು 8 ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿ ಬಂದಿದ್ದರು.
ಐಪಿಎಲ್ 2022: MI ಆರಂಭಿಕ ಆಟಗಾರರು ಯಾರೆಂದು ಬಿಚ್ಚಿಟ್ಟ ರೋಹಿತ್; ಪ್ರಮುಖ ಆಟಗಾರನೇ ಅನುಮಾನ!
ರಾಜ್ಯವನ್ನು ಪ್ರತಿನಿಧಿಸಿದ ಮೊದಲ ಯುವತಿ
ಪರ್ವತಾರೋಹಣ ಬಳಿಕ ಸ್ಕೀಯಿಂಗ್‌ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ತರಬೇತಿಯನ್ನು ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ಪಡೆದಿದಲ್ಲದೆ, ಹೆಚ್ಚಿನ ತರಬೇತಿಯನ್ನು 2019ರಲ್ಲಿ ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ಪಡೆದು ಬಂದಿರುವುದು ಗಮನಾರ್ಹವಾಗಿದೆ.
2020ರ ಫೆಬ್ರವರಿ ತಿಂಗಳಲ್ಲಿ ಉತ್ತರಾಖಂಡ್‌ನ ನಾರ್ಡಿಕ್‌ನಲ್ಲಿ ನಡೆದ ರಾಷ್ಟ್ರೀಯ ಸ್ಕೀಯಿಂಗ್ ಚಾಂಪಿಯನ್ ಶಿಪ್ ನ 10 ಮತ್ತು 15 ಕಿ.ಮೀ ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸಿದ ಯುವತಿ ಎಂಬ ಪ್ರಶಂಸೆಗೆ ಪಾತ್ರವಾಗಿದ್ದರು. ಅದಾದ ನಂತರ ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ನ್ಯಾಷನಲ್ ಕೇಲೋ ಇಂಡಿಯಾ ಮೀಟರ್ ಗೇಮ್ಸ್‌ನಲ್ಲಿ ಜೆಐಎಂ ಅಂಡ್ ಡಬ್ಲ್ಯೂಎಸ್ ಇನ್ ಸೊಟ್‌ನ 10ಕಿ.ಮೀ. ಮತ್ತು 5ಕಿ.ಮೀ. ನಾರ್ಡಿಕ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದುಕೊಂಡಿದ್ದರು. ಇದಾದ ಬಳಿಕ ಕಾಶ್ಮೀರದ ಗುಲ್ಮಾರ್‌ನಲ್ಲಿ ನಡೆದ ನ್ಯಾಷನಲ್ ಬಯಾಥ್ಲಾನ್ ಚಾಂಪಿಯನ್ ಶಿಪ್ ನ 10ಕಿ.ಮೀ. ಸ್ಕೀಯಿಂಗ್ ಮತ್ತು ಶೂಟಿಂಗ್ ನಲ್ಲಿ ಸ್ಪರ್ಧಿಸಿದ್ದರಾದರೂ ವಿಜಯ ಲಕ್ಷ್ಮಿ ಒಲಿದಿರಲಿಲ್ಲ.

ಮೌಂಟ್ ರೂಪೇವ್‌ನಲ್ಲಿ ಕಠಿಣ ತರಬೇತಿ
ಹಾಗೆನೋಡಿದರೆ ಭವಾನಿ ಅವರು ಈಗಾಗಲೇ ರಷ್ಯಾದ ಅತಿ ಎತ್ತರದ ಮೌಂಟ್ ಎಲ್‌ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬಂದಿದ್ದು, ನ್ಯೂಜಿಲ್ಯಾಂಡ್‌ನ ಜ್ವಾಲಾಮುಖಿ ಪರ್ವತವಾಗಿರುವ ಮೌಂಟ್ ರೂಪೇವ್‌ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತರಾಷ್ಟ್ರೀಯ ಸ್ಕೀಯಿಂಗ್ ಬೋಧಕರ ಅರ್ಹತೆಯನ್ನು ಹಾಗೂ ಕೆಲವು ತಿಂಗಳ ಹಿಂದೆ ನಾರ್ವೆಯಲ್ಲಿಯೂ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಚಿನ್ನದ ಹುಡುಗಿ ಭವಾನಿಯ ಬಗ್ಗೆ ಹೇಳುವುದಾದರೆ ಈಕೆ ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್‌ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್‌ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಇನ್ನಷ್ಟು ಹಾದಿ ಸುಗಮವಾಯಿತು.

ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗಿ
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ, ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ.
ಪ್ರೌಢಶಾಲೆಯಿಂದಲೇ ಎನ್‌ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ತರಬೆತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ಜೋದ್‌ಫುರ್‌ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್‌ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್‌ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೆ ಪಾತ್ರರಾಗಿದ್ದರು.

ಕಠಿಣ ಪ್ರದೇಶಗಳಲ್ಲಿ ಪರ್ವತಾರೋಹಣ
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್‌ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್(ಎಬಿವಿಐಎಂಎಎಸ್)ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ (ಹೆಚ್‌ಎಂಐ)ನಲ್ಲಿ ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಉತ್ತರಭಾರತದ ಹಿಮಚ್ಛಾದಿತ ಪ್ರದೇಶದಲ್ಲಿ ನಡೆಯುವ ಸ್ಕೀಯಿಂಗ್ ನ ವಿವಿಧ ಸ್ಪರ್ಧೆಗಳನ್ನು ದಕ್ಷಿಣ ಭಾರತದ ಸ್ಪರ್ಧಿಗಳು ಭಾಗವಹಿಸುವುದು ತೀರಾ ಅಪರೂಪವಾಗಿದ್ದು, ಈ ಪೈಕಿ ಭವಾನಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಪಡೆದಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications