
ಐಟಿ ದೈತ್ಯ ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರು ಭಾರತ ಪ್ರವಾಸದಲ್ಲಿದ್ದು, ಮೊದಲ ದಿನವೇ ಮಂಗಳವಾರ, ಫೆಬ್ರವರಿ 28ರ ಸಂಜೆ ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ಅವರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ನಡೆಸಿದರು.
ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ (ಎಂಸಿಎ) ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅವರ ಗಾತ್ರದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ ದಿನದಂದೇ, ಭಾರತದ ಮಾಜಿ ಕ್ರಿಕೆಟಿಗನನ್ನು ಬಿಲ್ ಗೇಟ್ಸ್ ಭೇಟಿಯಾಗಿರುವುದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.
ಬಿಲ್ ಗೇಟ್ಸ್ ಅವರನ್ನು ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ್ದರ ಉದ್ದೇಶವೆಂದರೆ, ವಿಶೇಷವಾಗಿ ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ಬಿಲ್ ಗೇಟ್ಸ್ ಅವರೊಂದಿಗಿನ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ತಿಳಿಸಿದ ಸಚಿನ್ ತೆಂಡೂಲ್ಕರ್, "ನಾವೆಲ್ಲರೂ ಜೀವನಪೂರ್ತಿ ವಿದ್ಯಾರ್ಥಿಗಳು. ನಮ್ಮ ಫೌಂಡೇಶನ್ ಕೆಲಸ ಮಾಡುವ ಮಕ್ಕಳ ಆರೋಗ್ಯ ರಕ್ಷಣೆ ಸೇರಿದಂತೆ ಸಾಮಾಜಿಕ ಕಾರ್ಯದ ದೃಷ್ಟಿಕೋನಗಳನ್ನು ತಿಳಿದುಕೊಳ್ಳಲು ಅದ್ಭುತವಾದ ಕಲಿಕೆಯ ಅವಕಾಶವಾಗಿದೆ. ಪ್ರಪಂಚದ ಸವಾಲುಗಳನ್ನು ಪರಿಹರಿಸಲು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದು ಪ್ರಬಲ ಮಾರ್ಗವಾಗಿದೆ. ನಿಮ್ಮ ಒಳನೋಟಗಳಿಗೆ ಧನ್ಯವಾದಗಳು ಬಿಲ್ ಗೇಟ್ಸ್," ಎಂದು ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಬಿಲ್ ಗೇಟ್ಸ್ ಭೇಟಿಯ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಅವರ ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 'ಇಬ್ಬರು ದಿಗ್ಗಜರ ಸಮಾಗಮ', 'ವಾವ್... ಒಂದೇ ಫ್ರೇಮ್‌ನಲ್ಲಿ ಇಬ್ಬರು ದಿಗ್ಗಜರು ಒಟ್ಟಿಗೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೀರ್ಷಿಕೆ ನೀಡಿದ್ದಾರೆ.
ಮುಂಬೈನಲ್ಲಿ ಬಿಲ್ ಗೇಟ್ಸ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್ ಈ ಸಭೆಯನ್ನು ಆಯೋಜಿಸಿದ್ದು, ಇದು ಮಕ್ಕಳ ಆರೋಗ್ಯವನ್ನು ಸುಧಾರಣೆ ಮತ್ತು ಬಡತನ ನಿರ್ಮೂಲನೆ ಸೇರಿದಂತೆ ವಿಶ್ವದಾದ್ಯಂತ ವಿವಿಧ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಕೆಲಸ ಮಾಡುತ್ತದೆ.
ಸಚಿನ್ ತೆಂಡೂಲ್ಕರ್ ಹೊರತುಪಡಿಸಿ, ಬಿಲ್ ಗೇಟ್ಸ್ ಅವರು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಭೇಟಿಯಾಗಿ, ಹಲವು ಆರ್ಥಿಕ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ಕೋವಿಡ್-19 ನಂತರ ಬಿಲ್ ಗೇಟ್ಸ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, "ಭಾರತವು ಭವಿಷ್ಯದ ಭರವಸೆಯನ್ನು ನೀಡಲಿದೆ. ಮುಂದಿನ ವಾರ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಹಸಿವಿನಂತಹ ದೊಡ್ಡ ಸವಾಲುಗಳನ್ನು ನಿಭಾಯಿಸಲು ಅಲ್ಲಿನ ಉದ್ಯಮಿಗಳು ಮಾಡುತ್ತಿರುವ ಕೆಲಸವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ," ಎಂದು ಫೆಬ್ರವರಿ 23ರಂದು ತಿಳಿಸಿದ್ದರು.