ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ)ದಿಂದ 'ರಾಷ್ಟ್ರೀಯ ಐಕಾನ್' ಎಂದು ಗುರುತಿಸಲು ನಿರ್ಧರಿಸಲಾಗಿದೆ.
ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಎಂದು ಗುರುತಿಸಲು ಬುಧವಾರ, ಆಗಸ್ಟ್ 23ರಂದು ನವದೆಹಲಿಯ ರಂಗಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ದೇಶದ ಯುವಜನತೆಯ ಮೇಲೆ ಭಾರಿ ಪ್ರಭಾವ ಬೀರಿರುವ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮೂಲಕ, ಮತದಾನದ ಕಡೆಗೆ ದೇಶದ ಯುವಜನತೆಯ ನಿರಾಸಕ್ತಿಯನ್ನು ಹೋಗಲಾಡಿಸಲು, ರಾಷ್ಟ್ರೀಯ ಐಕಾನ್ ಆಗಿ ಸಚಿನ್ ತೆಂಡೂಲ್ಕರ್ ಅವರಿಂದ ಧನಾತ್ಮಕ ಪ್ರಭಾವವನ್ನು ನಿರೀಕ್ಷಿಸುವ ಉದ್ದೇಶವನ್ನು ಚುನಾವಣಾ ಆಯೋಗ ಹೊಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಚುನಾವಣಾ ಆಯೋಗ ಹಲವು ರಾಷ್ಟ್ರೀಯ ಐಕಾನ್‌ಗಳನ್ನು ಮತದಾನದ ಕಾರಣಕ್ಕಾಗಿ ಗುರುತಿಸಿದೆ. 2022ರಲ್ಲಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರನ್ನು ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಎಂದು ಗುರುತಿಸಲಾಗಿತ್ತು.
ಇದಲ್ಲದೆ, ಚಿತ್ರನಟ ಅಮೀರ್ ಖಾನ್, ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಬಾಕ್ಸರ್ ಮೇರಿ ಕೋಮ್ ಅವರು 2019ರ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಐಕಾನ್ ಆಗಿದ್ದರು.
"ಸಚಿನ್ ತೆಂಡೂಲ್ಕರ್ ಅವರ ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ ವಿಶೇಷವಾಗಿ, 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಯುವಕರಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಪ್ರತಿಮ ಪ್ರಭಾವವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗುತ್ತಿದೆ,"ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದು ವಿಶ್ವದ ಯಾವುದೇ ಆಟಗಾರನಿಗಿಂತ ಹೆಚ್ಚು ಪಂದ್ಯಗಳಾಗಿವೆ. ಟೆಸ್ಟ್‌ನಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 51 ಶತಕಗಳು ಮತ್ತು 68 ಅರ್ಧಶತಕಗಳು ಒಳಗೊಂಡಿವೆ. ಅಜೇಯ 248 ರನ್ ಅತ್ಯುತ್ತಮ ಸ್ಕೋರ್ ಆಗಿದೆ.
ಇನ್ನು 463 ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದು, 44.83ರ ಸರಾಸರಿ ಮತ್ತು 86.23 ಸ್ಟ್ರೈಕ್ ರೇಟ್‌ನಲ್ಲಿ 18,426 ರನ್ ಗಳಿಸಿದ್ದಾರೆ. ಏಕದಿನ ಸ್ವರೂಪದಲ್ಲಿ ಅಜೇಯ 200 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿಗೆ 49 ಶತಕಗಳು ಮತ್ತು 96 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಏಕದಿನ ದ್ವಿಶತಕ ಗಳಿಸಿದ ವಿಶ್ವದ ಮೊದಲ ಆಟಗಾರನಾಗಿದ್ದಾರೆ ಮತ್ತು ಎರಡೂ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಕ್ರಿಕೆಟಿಗನಾಗಿದ್ದಾರೆ.
IND vs WI: ಈ ಜೋಡಿ ಭಾರತ ಮುಂದಿನ ಸಚಿನ್-ಗಂಗೂಲಿ ಆಗಬಹುದು; ರಾಬಿನ್ ಉತ್ತಪ್ಪ
ಸಚಿನ್ ತೆಂಡೂಲ್ಕರ್ ಅವರು ಆಡಿದ ಏಕೈಕ ಟಿ20 ಪಂದ್ಯದಲ್ಲಿ 10 ರನ್ ಗಳಿಸಿದರು. ಒಟ್ಟಾರೆ 664 ಪಂದ್ಯಗಳಲ್ಲಿ 100 ಶತಕಗಳು ಮತ್ತು 164 ಅರ್ಧಶತಕಗಳೊಂದಿಗೆ 48.52ರ ಸರಾಸರಿಯಲ್ಲಿ 34,357 ರನ್ ಗಳಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಆರು ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ.