ಗುರಿಂದರ್‌ವೀರ್ ರಾಷ್ಟ್ರೀಯ ದಾಖಲೆ; ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಅರ್ಹತೆ
ರಾಂಚಿ: ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ 2026ನಲ್ಲಿ ಶನಿವಾರವೂ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಕೇವಲ 24 ಗಂಟೆಗಳ ಅಂತರದಲ್ಲಿ ಗುರಿಂದರ್‌ವೀರ್ ಸಿಂಗ್ ರಾಷ್ಟ್ರೀಯ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಅನಿಮೇಶ್ ಕುಜೂರ್ ಹೀಟ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದರು.
ಪಂಜಾಬ್ ತಂಡದ ಗುರಿಂದರ್‌ವೀರ್ ಸಿಂಗ್ ಅತಿ ವೇಗದ ಓಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಇವರು 100 ಮೀಟರ್ ಓಟದಲ್ಲಿ ಭಾರತದ ವೇಗದ ಓಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಗುರಿಂದರ್‌ವೀರ್ ಸಿಂಗ್ ಫೆಡರೇಷನ್ ಕಪ್ 2026 ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ನಿಗದಿತ ದೂರವನ್ನು 10.09 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ಬರೆದರು. ಅಲ್ಲದೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಅರ್ಹತೆ ಪಡೆದರು. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು 10.16 ಸೆಕೆಂಡ್‌ಗಳಲ್ಲಿ ನಿಗದಿತ ಓಟವನ್ನು ಕ್ರಮಿಸಬೇಕಿತ್ತು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅನಿಮೇಶ್ ಕುಜೂರ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು.
ರಾಂಚಿಯಲ್ಲಿ ನಡೆದ ಕ್ರೀಡಾಕೂಟವು ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಶುಕ್ರವಾರ ಗುರಿಂದರ್‌ವೀರ್ ಸಿಂಗ್ ಮೊದಲು 10.17 ಸೆ. ನಿಗದಿತ ದೂರವನ್ನು ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಈ ದಾಖಲೆಯನ್ನು ಕೇವಲ ಐದು ನಿಮಿಷಗಳ ಅಂತರದಲ್ಲಿ ಅನಿಮೇಶ್ ಕುಜೂರ್ ಅಳಿಸಿ ಹಾಕಿದರು. ಇವರು ನಿಗದಿತ ದೂರವನ್ನು 10.15 ಸೆಕೆಂಡ್‌ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.
ಕಾಮನ್‌ವೆಲ್ತ್‌ಗೆ ಗುರಿಂದರ್‌ವೀರ್ ಸಿಂಗ್ ಅರ್ಹತೆ
ಶನಿವಾರ ನಡೆದ 100 ಮೀಟರ್ ಫೈನಲ್ ಸ್ಪರ್ಧೆಯಲ್ಲಿ ಅನಿಮೇಶ್ ಕುಜೂರ್ ಅವರ ಸವಾಲನ್ನು ಗುರಿಂದರ್‌ವೀರ್ ಸಿಂಗ್ ಮೆಟ್ಟಿನಿಂತು ಪ್ರಶಸ್ತಿ ಪಡೆದರು. ಅಲ್ಲದೆ ನೂತನ ರಾಷ್ಟ್ರೀಯ ದಾಖಲೆ ಬರೆದು, ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು. ಅನಿಮೇಶ್ ಕುಜೂರ್ ಬೆಳ್ಳಿ, ಪ್ರಣವ್ ಪ್ರಮೋದ್ ಕಂಚಿನ ಸಾಧನೆ ಮಾಡಿದರು.

ವಿಶಾಲ್ ಟಿ.ಕೆ ಇತಿಹಾಸ
ಪುರುಷರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ತಮಿಳುನಾಡಿನ ಅಥ್ಲೀಟ್ ವಿಶಾಲ್ ಟಿ.ಕೆ. ಕೇವಲ 44.98 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಪುರುಷರ 400 ಮೀಟರ್ ಓಟದಲ್ಲಿ 45 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಕೇವಲ 0.02 ಸೆಕೆಂಡುಗಳ ಅಂತರದಿಂದ ಕಾಮನ್‌ವೆಲ್ತ್ ಗೇಮ್ಸ್‌ನ ಅರ್ಹತೆಯನ್ನು ಕಳೆದುಕೊಂಡರು. ಇದೇ ಸ್ಪರ್ಧೆಯಲ್ಲಿ ರಾಜೇಶ್ ರಮೇಶ್ (45.31 ಸೆ.) ಬೆಳ್ಳಿ ಮತ್ತು ಜಯ್ ಕುಮಾರ್ (45.47 ಸೆ.) ಕಂಚಿನ ಪದಕ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications