
ಮನು ಡಿ.ಪಿ ಪ್ರದರ್ಶನದ ಕುರಿತು ಹೊಗಳಿದ ನೀರಜ್ ಚೋಪ್ರಾ
ಜಾವೆಲಿನ್ ಥ್ರೋನಲ್ಲಿ ಮತ್ತ್ಯಾವ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನ ನಿಮ್ಮ ಗಮನ ಸೆಳೆದಿದೆ. ಉದಯೋನ್ಮುಖ ಅಥ್ಲೀಟ್‌ಗಳು ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಿದ ನೀರಜ್,
''ಭಾರತದಲ್ಲಿ ಜಾವೆಲಿನ್ ಥ್ರೋ ಪ್ರಗತಿ ಖುಷಿ ನೀಡಿದೆ. ಅನೇಕ ಯುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮನು ಡಿ.ಪಿ, ರೋಹಿತ್ ಯಾದವ್, ಸಾಹಿಲ್ ಸಿಲ್ವಾಲ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ 80 ಮೀ. ದೂರವನ್ನು ದಾಟಿದ್ದಾರೆ. ಸದ್ಯದಲ್ಲೇ ಭಾರತ ಜಾವೆಲಿನ್ ಥ್ರೋನಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಪದಕಗಳನ್ನು ಗೆಲ್ಲಲಿದೆ ಎನ್ನುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ'' ಎಂದು ಹೇಳಿದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಮನು, ತಮ್ಮ ಚೊಚ್ಚಲ ರಾಷ್ಟ್ರೀಯ ಗೇಮ್ಸ್‌ನಲ್ಲಿ 80.71 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. ಈ ಹಿಂದೆಯೂ ನೀರಜ್, ಮನು ಅವರ ಪ್ರದರ್ಶನವನ್ನು ಟ್ವೀಟರ್‌ನಲ್ಲಿ ಶ್ಲಾಘಿಸಿದ್ದರು.

ನವರಾತ್ರಿ ಸಂಭ್ರಮದಲ್ಲಿ ಭಾಗಿಯಾದ ನೀರಜ್ ಚೋಪ್ರಾ
ನಾಷನಲ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನೀರಜ್ ನವರಾತ್ರಿ ಸಂಭ್ರಮದಲ್ಲೂ ಭಾಗಿಯಾದರು. ''ಮೊಟ್ಟ ಮೊದಲ ಬಾರಿಗೆ ಗರ್ಬಾ ನೃತ್ಯ ಮಾಡಿದೆ. ನವರಾತ್ರಿ ಸಂಭ್ರಮದಲ್ಲಿ ಅಷ್ಟೊಂದು ಜನ ಒಟ್ಟಿಗೆ ಸೇರಿದ್ದು ನೋಡಿ ಖುಷಿಯಾಯಿತು'' ಎಂದರು.
ಇನ್ನು ಉದ್ಘಾಟನಾ ಸಮಾರಂಭವನ್ನು ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಸಮಾರಂಭದ ರೀತಿಯಲ್ಲಿ ಆಯೋಜಿಸಲಾಗಿತ್ತು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಕೇವಲ 3-4 ತಿಂಗಳುಗಳಲ್ಲಿ ಇಷ್ಟು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಯಶಸ್ವಿಯಾದ ಗುಜರಾತ್ ಸರ್ಕಾರದ ಪರಿಶ್ರಮವನ್ನೂ ನೀರಜ್ ಕೊಂಡಾಡಿದರು.
ಕಾಲಿನ ಮೂಳೆ ಮುರಿದಿದ್ರೂ ಚಿನ್ನದ ಪದಕ ಗೆದ್ದಿದ್ದೆ: ರೋಚಕ ಸಂಗತಿ ಬಹಿರಂಗ ಪಡಿಸಿದ ಪಿ.ವಿ. ಸಿಂಧು

ನ್ಯಾಷನಲ್ ಗೇಲ್ಸ್ ಯುವ ಕ್ರೀಡಾಪಟುಗಳ ಬದುಕಿನ ಹೊಸ ಬೆಳಕಾಗಲಿದೆ!
ಯುವ ಕ್ರೀಡಾಪಟುಗಳು ಬದುಕಿನಲ್ಲಿ ನ್ಯಾಷನಲ್ ಗೇಮ್ಸ್ ಬಹಳ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಿಸಿದ ನೀರಜ್, ''ನಮ್ಮ ಕ್ರೀಡೆಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಡುವುದು ಬೇರೆ. ನ್ಯಾಷನಲ್ ಗೇಮ್ಸ್ ಒಂದು ರೀತಿಯಲ್ಲಿ ಒಲಿಂಪಿಕ್ಸ್ ಇದ್ದಂತೆ. ಇಷ್ಟೊಂದು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಒಟ್ಟಿಗೆ ಸೇರುವುದು ಅಪರೂಪ. 2015ರಲ್ಲಿ ನಾನು ಮೊದಲ ಬಾರಿಗೆ ನ್ಯಾಷನಲ್ ಗೇಮ್ಸ್ ಆಡಿದ್ದೆ. ಆ ಅನುಭವ ನನಗೆ ಹಲವು ಪಾಠಗಳನ್ನು ಕಲಿಸಿತು. ಆಗ ನಾನಿನ್ನೂ ಕಿರಿಯ ಅಥ್ಲೀಟ್. ಆ ಬಳಿಕ ನಾನು ವಿವಿಧ ಕ್ರೀಡೆಗಳ ಅನೇಕ ಕ್ರೀಡಾಪಟುಗಳನ್ನು ಭೇಟಿಯಾದೆ. ನ್ಯಾಷನಲ್ ಗೇಮ್ಸ್‌ನಲ್ಲಿ 5ನೇ ಸ್ಥಾನ ಪಡೆದ ನಾನು ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದೆ. ಹೀಗಾಗಿ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿದ್ದೇ ನ್ಯಾಷನಲ್ ಗೇಮ್ಸ್‌ನಲ್ಲಿ ಎನ್ನುವ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದು ಖುಷಿಯಿಂದ ಹೇಳಿದರು.
ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡವನ್ನ ಹೆಸರಿಸಿದ ಹರ್ಷ ಬೋಗ್ಲೆ: ಟೀಂ ಇಂಡಿಯಾ ಹೆಸರಿಲ್ಲ!

ಟೋಕಿಯೋ ಒಲಿಂಪಿಕ್ಸ್ ಬಳಿಕ ತನ್ನ ಜೀವನೇ ಬದಲಾಯಿತು: ನೀರಜ್ ಚೋಪ್ರಾ
ಟೋಕಿಯೋ ಒಲಿಂಪಿಕ್ಸ್ ಬಳಿಕ ತಮ್ಮ ಜೀವನ ಹೇಗೆ ಬದಲಾಗಿದೆ ಎನ್ನುವುದರ ಬಗ್ಗೆಯೂ ನೀರಜ್ ಮಾಹಿತಿ ಹಂಚಿಕೊಂಡರು. ''ಒಲಿಂಪಿಕ್ಸ್ ನನಗೆ ಒತ್ತಡವನ್ನು ಹೇಗೆ ನಿಭಾಯಿಸಬೇಕು. ತಾಳ್ಮೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಿತು. ಒಲಿಂಪಿಕ್ಸ್ ಬಳಿಕ ನಾನು ಸ್ಪರ್ಧಿಸಿದ ಬಹುತೇಕ ಎಲ್ಲಾ ಕೂಟಗಳಲ್ಲೂ ನಾನು ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್‌ನಿಂದ ಗಳಿಸಿದ ಅನುಭವ ಒಬ್ಬ ಕ್ರೀಡಾಪಟುವಾಗಿ ನನ್ನಲ್ಲಿ ಹಲವು ಬದಲಾವಣೆಗೆ ಕಾರಣವಾಗಿದೆ'' ಎಂದು ನೀರಜ್ ಹೇಳಿಕೊಂಡರು.
ದೇಶದಲ್ಲಿ ಕ್ರೀಡೆಗೆ ಈಗ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೀರಜ್, ಹಲವು ಸಂಸ್ಥೆಗಳು ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡುತ್ತಿವೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ(ಟಾಪ್ಸ್) ಮೂಲಕ ಕೇಂದ್ರ ಸರ್ಕಾರ ಕ್ರೀಡಾಪಟುಗಳ ತರಬೇತಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಹಿಂದೆಯೂ ಸರ್ಕಾರ ಪ್ರೋತ್ಸಾಹ ನೀಡುತ್ತಿತ್ತು. ಆದರೆ ಈಗ ಪ್ರಮಾಣ ಹೆಚ್ಚಿದೆ ಎಂದು ನೀರಜ್ ಹೇಳಿದರು.

ನೀರಜ್ ಚೋಪ್ರಾ ಹಾಗೂ ಕರ್ನಾಟಕದ ಮನು ಡಿಪಿ ಕೋಚ್ ಒಬ್ಬರೇ!
ಆರ್ಮಿ ಇನ್‌ಸ್ಟಿಟ್ಯೂಟ್ ಆಪ್ ಸ್ಪೋರ್ಟ್ಸ್‌ನಲ್ಲಿ 2019ರ ಬಳಿಕ ಮನು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಕೋಚ್ ಕಾಶಿನಾಥ್ ನಾಯ್ಕ್ ಮನು ಅವರಿಗೂ ತರಬೇತಿ ನೀಡಲು ಆರಂಭಿಸಿದ್ದರು. ಖೇಲೋ ಇಂಡಿಯಾದಲ್ಲಿ ನೀಡಿದ್ದ ಪ್ರದರ್ಶನವನ್ನು ನೋಡಿ ಮನು ಅವರಲ್ಲಿನ ಸಾಮರ್ಥ್ಯವನ್ನು ಮನಗಂಡಿದ್ದರು. ನಂತರ ಹಂತಹಂತವಾಗಿ ಬೆಳೆಯುತ್ತಾ ಸಾಗಿದ ಮನು , ನೀರಜ್ ಚೋಪ್ರಾ ಅವರ ಸಾಧನೆಯಿಂದ ಮತ್ತಷ್ಟು ಹುರುಪು ಪಡೆದುಕೊಂಡರು.
ಆರಂಭಿಕ ದಿನಗಳಿಂದಲೂ ನೀರಜ್ ಚೋಪ್ರಾ ಅವರನ್ನು ನೋಡಿಕೊಂಡು ಬೆಳೆದ ಮನು ಅವರ ಸಾಧನೆಯಿಂದ ಮತ್ತಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ನಿವಾಸಿಯಾಗಿರುವ ಮನು ಪ್ರಾಥಮಿಕ ಶಿಕ್ಷಣವನ್ನು ಬೇಲೂರಿನಲ್ಲಿಯೇ ಮುಗಿಸಿದ್ದಾರೆ. ಪಿಯುಸಿ ಬಳಿಕ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿತ್ತಾ ಸಾಗಿದ ಮನು ದ್ವಿತೀಯ ವರ್ಷದ ಪಿಯಿಸಿ ವೇಳೆಗೆ ಕ್ರೀಡಾ ಕೋಟಾದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಇದು ಮನು ಅವರ ಕ್ರೀಡಾ ಬದುಕಿಗೆ ಮತ್ತೊಂದು ತಿರುವು ನೀಡಿತು.


Click it and Unblock the Notifications
