ಭಾರತದ ಈ ಚಾಂಪಿಯನ್ ಸ್ಪ್ರಿಂಟ್ ರನ್ನರ್ ಸಲಿಂಗಿಯಂತೆ!

ಭುವನೇಶ್ವರ್, ಮೇ 19: ಮಹಿಳಾ ವಿಭಾಗದಲ್ಲಿ ಭಾರತದ ಚಾಂಪಿಯನ್ ಸ್ಪ್ರಿಂಟರ್ ಆಗಿರುವ ಒಡಿಶಾ ಮೂಲದ ಅಥ್ಲೀಟ್ ದೂತೀ ಚಾಂದ್ ತಾವು ಸಲಿಂಗಿ ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಈ ಮೂಲಕ ಸಲಿಂಗಿ ಎಂದು ಬಹಿರಂಗವಾಗಿ ಒಪ್ಪಿಕೊಂಡ ಭಾರತದ ಮೊತ್ತ ಮೊದಲ ಅಥ್ಲೀಟ್ ಎನಿಸಿಕೊಂಡಿರುವ ದೂತೀ ಚಾಂದ್, ತಮ್ಮ ತವರೂರು ಒಡಿಶಾದ ಚಾಕಾ ಗೋಪಾಲ್‌ಪುರದಲ್ಲಿ ಒಂದು ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ತಮ್ಮ ಬಾಳ ಸಂಗಾತಿಯ ಹೆಸರನ್ನು 23 ವರ್ಷ 100 ಮೀ. ಸ್ಪ್ರಿಂಟ್ ಓಟಗಾರ್ತಿ ಬಹಿರಂಗ ಪಡಿಸಿಲ್ಲ.
"ನನ್ನ ಬಾಳ ಸಂಗಾತಿಯನ್ನು ಹುಡುಕಿಕೊಂಡಿದ್ದೇನೆ. ಯಾರ ಜೊತೆಗೆ ಇರಬೇಕೆಂದು ಬಯಸುತ್ತೀವೋ ಅವರೊಟ್ಟಿಗೆ ಇರುವ ಸ್ವಾತಂತ್ರ ಎಲ್ಲರಿಗೂ ಸಿಗಬೇಕು. ಸಲಿಂಗಿ ಬಾಂಧವ್ಯಕ್ಕೆ ನಾನು ಸದಾ ಬೆಂಬಲಿಸುತ್ತಾ ಬಂದಿದ್ದೇನೆ. ಇದು ವೈಯಕ್ತಿಕ ಆಯ್ಕೆ. ಸದ್ಯ ನನ್ನ ಗಮನವೇನಿದ್ದರೂ, ಮುಂಬರುವ ವಿಶ್ವ ಚಾಂಪಿಯನ್‌ಷಿಪ್ಸ್ ಮತ್ತು ಒಲಿಂಪಿಕ್ ಗೇಮ್ಸ್ ಕಡೆಗಿದೆ. ಆದರೆ, ಭವಿಷ್ಯದಲ್ಲಿ ಆಕೆಯೊಂದಿಗೆ ನನ್ನ ಬದುಕು ಕಟ್ಟಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ,'' ಎಂದು ಸಂದರ್ಶನವೊಂದರಲ್ಲಿ ದೂತೀ ಚಾಂದ್ ಹೇಳಿದ್ದಾರೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದ ದೂತೀ ಚಾಂದ್, ಮಹಿಳೆಯರ 100 ಮೀ. ಸ್ಪ್ರಿಂಟ್‌ನಲ್ಲಿ ಮತ್ತು 200 ಮೀ. ಸ್ಪ್ರಿಂಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಈ ಮೂಲಕ ಪ್ರತ್ಯೇಕ ವಿಭಾಗಗಳಲ್ಲಿ ಕ್ರಮವಾಗಿ 20 ಮತ್ತು 16 ವರ್ಷಗಳ ಬಳಿಕ ಭಾರತಕ್ಕೆ ಮೊದಲ ಪದಕಗಳನ್ನು ಗೆದ್ದುಕೊಟ್ಟಿದ್ದರು.
ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ!
"ಪ್ರತಿಯೊಬ್ಬರಿಗೂ ಪ್ರೀತಿಸುವ ಹಕ್ಕು ಇರಬೇಕು ಎಂಬುದನ್ನು ನಂಬಿದ್ದೇನೆ. ಪ್ರೀತಿಗಿಂತ ಮಿಗಿಲಾದ ಭಾವನೆ ಮತ್ತೊಂದಿಲ್ಲ. ಇದನ್ನು ಅಲ್ಲಗಳೆಯುವಂತೆಯೂ ಇಲ್ಲ. ಭಾರತದ ಸುಪ್ರೀಂ ಕೋರ್ಟ್ ಕೂಡ ತನ್ನ ಈ ಹಿಂದಿನ ಕಾನೂನನ್ನು ಬದಲಾಯಿಸಿದೆ. ಒಬ್ಬ ಅಥ್ಲೀಟ್ ಆಗಿ ನನ್ನನ್ನು ಈ ವಿಚಾರವಾಗಿ ಯಾರೂ ಪ್ರಶ್ನೆ ಮಾಡಲಾರರು, ಏಕೆಂದರೆ ನಾನು ಯಾರ ಜೊತೆ ಇರಬೇಕೆಂಬುದು ನನ್ನ ಆಯ್ಕೆ. ಇದು ನನ್ನ ವೈಯಕ್ತಿಕ ನಿರ್ಧಾರ ಇದನ್ನು ಗೌರವಿಸತಕ್ಕದ್ದು. ಅಂದಹಾಗೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಹೋರಾಟವನ್ನು ಮುಂದುವರಿಸಲಿದ್ದೇನೆ,'' ಎಂದು ದೂತೀ ಚಾಂದ್ ಹೇಳಿದ್ದಾರೆ.
ಇದೇ ವರ್ಷ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್ಸ್‌ಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ದೂತೀ ಚಾಂದ್, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಎದುರು ನೋಡುತ್ತಿದ್ದಾರೆ.
"ನನ್ನನ್ನು ಕ್ರೀಡಾಪಟುವಾಗಿ ಮುಂದುವರಿಯಲು ಪ್ರೋತ್ಸಾಹಿಸುವಂತಹ ವ್ಯಕ್ತಿಯ ಹುಡುಕಾಟದಲ್ಲಿದ್ದೆ. ಕಳೆದ 10 ವರ್ಷಗಳಿಂದ ಸ್ಪ್ರಿಂಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ 5ರಿಂದ 7 ವರ್ಷಗಳ ವರೆಗೆ ನಾನು ಇದರಲ್ಲೇ ಮುಂದುವರಿಯಲಿದ್ದೇನೆ. ವಿಶ್ವದ ವಿವಿಧ ಭಾಗಗಳಲ್ಲಿ ಸ್ಪರ್ಧಿಸಲು ಪ್ರಯಾಣಿಸಲಿದ್ದೇನೆ. ಇದು ಸುಲಭವಾದುದ್ದಲ್ಲ. ನನಗೆ ಯಾರಾದರು ಒಬ್ಬ ವ್ಯಕ್ತಿಯ ನೆರವು (ಮಾನಸಿಕವಾಗಿ ಬೆಂಬಲ ನೀಡುವ) ಬೇಕಿದೆ,'' ಎಂದು ದೂತೀ ವಿವರಿಸಿದ್ದಾರೆ.
ಮಹಿಳೆಯರ 100 ಮೀ. ಸ್ಪ್ರಿಂಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದೂತೀ ಚಾಂದ್, ಕೆಲ ವರ್ಷಗಳ ಹಿಂದೆ ಲಿಂಗ ಪರೀಕ್ಷೆಗೆ ಗುರಿಯಾಗಿ ಅಂತಾರಾಷ್ಟ್ರೀ ಅಥ್ಲೆಟಿಕ್ಸ್ ಕೂಟಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಕ್ಕೊಳಗಾಗಿದ್ದರು. ಆದರೆ, ಕಾನೂನಾತ್ಮಕ ಹೋರಾಟದಲ್ಲಿ ಗೆದ್ದು ತಮ್ಮ ಅಥ್ಲೆಟಿಕ್ಸ್ ವೃತ್ತಿ ಬದುಕಿಗೆ ಮರಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications