ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿಯೇ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನ ಹಿರಿಯ ರಾಷ್ಟ್ರೀಯ ಪುರುಷರ ತಂಡದ ಭಾಗವಹಿಸುವಿಕೆ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗುರುವಾರ ಮಹತ್ವದ ನಿರ್ಧಾರ ತಿಳಿಸಿದೆ.
ಭಾರತದಲ್ಲಿ ಪಾಕಿಸ್ತಾನ ಆಟಗಾರರಿಗೆ ಭದ್ರತಾ ಅಂಶಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಐಸಿಸಿ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸುವ ವಿಷಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಸರ್ಕಾರದಿಂದ ಮೊದಲ ಬಾರಿಗೆ ಅಧಿಕೃತ ಸೂಚನೆ ಬಂದಿರುವುದು ದೊಡ್ಡ ಬೆಳವಣಿಗೆಯಾಗಿದೆ.
ಈ ವರ್ಷದ ಕೊನೆಯಲ್ಲಿ ಭಾರತ ಏಕದಿನ ವಿಶ್ವಕಪ್‌ಗೆ ಸಂಪೂರ್ಣ ಆತಿಥ್ಯ ವಹಿಸಲಿದೆ. ಭಾರತಕ್ಕೆ ಪ್ರಯಾಣಿಸುವ ಪಾಕಿಸ್ತಾನ ತಂಡದ ಯೋಜನೆಗಳ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವಕಪ್‌ನ ವೇಳಾಪಟ್ಟಿಯನ್ನು ಈವರೆಗೆ ಪ್ರಕಟಿಸಿಲ್ಲ.
ಐಸಿಸಿಯು ಈ ಹಿಂದೆ ಒಂದು ವರ್ಷ ಮುಂಚಿತವಾಗಿ ವಿಶ್ವಕಪ್ ಪಂದ್ಯಗಳನ್ನು ಘೋಷಿಸುತ್ತಿತ್ತು. ಆದರೆ ಈ ವರ್ಷ ವಿಳಂಬವಾಗಿದೆ. ಜೂನ್ 27ರಂದು ಅಂತಿಮ ವೇಳಾಪಟ್ಟಿ ಹೊಬೀಳುವ ಸಾಧ್ಯತೆ ಇದೆ. ಜೂನ್ 27ರಿಂದ ಐಸಿಸಿ ಪಂದ್ಯಾವಳಿ ಆರಂಭವಾಗಲು ಕೇವಲ 100 ದಿನಗಳು ಮಾತ್ರ ಬಾಕಿ ಉಳಿಯಲಿವೆ.
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು, "ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಏಕಪಕ್ಷೀಯ ಕರೆಯನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಮತ್ತು ಅದು ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರುತ್ತದೆ," ಎಂದು ಒತ್ತಿ ಹೇಳಿದ್ದರು.
"ಇದಕ್ಕಾಗಿ ತಾನು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ ಮತ್ತು ಪಾಕಿಸ್ತಾನ ಸರ್ಕಾರವು ಅವರ ಪ್ರಯಾಣವನ್ನು ಅನುಮೋದಿಸಿದರೆ ಮಾತ್ರ ಕರಡು ವೇಳಾಪಟ್ಟಿಯನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ತಿಳಿಸಿದೆ," ಎಂದು ನಜಮ್ ಸೇಥಿ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ರಾಜಕೀಯವನ್ನು ಕ್ರೀಡೆಯೊಂದಿಗೆ ಬೆರೆಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡದಿರುವ ಭಾರತದ ನೀತಿ ನಿರಾಶಾದಾಯಕವಾಗಿದೆ ಎಂದು ಜಹ್ರಾ ಬಲೂಚ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
"ನಾವು ಪಾಕಿಸ್ತಾನ ಕ್ರಿಕೆಟಿಗರ ಭದ್ರತಾ ಪರಿಸ್ಥಿತಿ ಸೇರಿದಂತೆ ವಿಶ್ವಕಪ್‌ನಲ್ಲಿ ನಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಗಮನಿಸುತ್ತಿದ್ದೇವೆ ಮತ್ತು ಮೌಲ್ಯಮಾಪನ ಮಾಡುತ್ತಿದ್ದೇವೆ. ನಾವು ಸರಿಯಾದ ಸಮಯದಲ್ಲಿ ಪಿಸಿಬಿಗೆ ನಮ್ಮ ಅಭಿಪ್ರಾಯಗಳನ್ನು ನೀಡುತ್ತೇವೆ," ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ತಂಡ ಕೊನೆಯದಾಗಿ 2016ರ ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ತೆರಳಿತ್ತು. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಭದ್ರತಾ ದೃಷ್ಟಿಯಿಂದ ಧರ್ಮಶಾಲಾದಿಂದ ಕೋಲ್ಕತ್ತಾಕ್ಕೆ ಸ್ಥಳಾಂತರವಾಗಿತ್ತು.
ಇನ್ನು ಭಾರತ ಕ್ರಿಕೆಟ್ ತಂಡವು 2008ರಿಂದ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯುವ 2023ರ ಏಷ್ಯಾ ಕಪ್ ಆಡಲು ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತು. ಹೀಗಾಗಿ ಪಿಸಿಬಿ ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದ್ದರು. ಇದನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಒಪ್ಪಿಕೊಂಡಿದೆ.
ಹೈಬ್ರಿಡ್ ಮಾದರಿಯ ಪ್ರಕಾರ, ಏಷ್ಯಾ ಕಪ್ 2023ರ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದರೆ, ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳನ್ನು ಶ್ರೀಲಂಕಾ ಆಯೋಜಿಸಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಸೇರಿದಂತೆ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.