
ದುಬೈ, ಮಾರ್ಚ್ 8: ಇಂಡೋನೇಷ್ಯಾ ವಿರುದ್ಧ 2-1ರ ಜಯ ದಾಖಲಿಸಿರುವ ಅಂಕಿತಾ ರೈನಾ ನಾಯಕತ್ವದ ಭಾರತದ ಫೆಡ್‌ಕಪ್ ತಂಡ ಪ್ಲೇ ಆಫ್ ಹಂತದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಫೆಡ್‌ಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ಪ್ಲೇ ಆಪ್‌ಗೆ ಪ್ರವೇಶಿಸುತ್ತಿರುವುದು ಇದೇ ಮೊದಲ ಬಾರಿ. ಹೀಗಾಗಿ ಭಾರತದ ವನಿತಾ ತಂಡ ಇತಿಹಾಸ ನಿರ್ಮಿಸಿದಂತಾಗಿದೆ. ಈ ಸಾಧನೆ ಮಹಿಳಾ ದಿನಾಚರಣೆಯಂದೇ ಆಗಿರುವುದು ವಿಶೇಷ.
ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ರುತುಜಾ ಭೋಸಲೆ, ಇಂಡೋನೇಷ್ಯಾದ 16ರ ಹರೆಯದ ಪ್ರಿಸ್ಕಾ ವಿರುದ್ಧ 3-6, 6-0, 3-6ರ ಸೋಲನುಭಿಸಿದರು. ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ್ತಿ ಅಂಕಿತಾ ರೈನಾ ಅವರು ಇಂಡೋನೇಷ್ಯಾದ ಪ್ರತಿಭಾನ್ವಿತೆ ಅಲ್ಡಿಲಾ ಸುಟ್ಜಿಯಾಡಿ ವಿರುದ್ಧ 6-3, 6-3ರ ಜಯ ದಾಖಲಿಸಿದರು. ಹೀಗಾಗಿ ಇತ್ತಂಡಗಳ ಅಂಕ 1-1ರಿಂದ ಸಮಬಲಗೊಂಡಿತ್ತು.
ಆರಂಭಿಕ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ಅಂಕಿತಾ, ಪ್ರಮುಖ ಪಂದ್ಯದಲ್ಲಿ ಗೆದ್ದಿದ್ದು ಭಾರತದ ಮುನ್ನಡೆಗೆ ಕಾರಣವಾಯಿತು. ಸಿಂಗಲ್ಸ್ ಬಳಿಕ ಅಂಕಿತಾ, ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾಗೆ ಜೊತೆ ನೀಡಿದರು. ಸಾನಿಯಾ ಮಿರ್ಝಾ-ಅಂಕಿತಾ ರೈನಾ ಜೋಡಿ ಸುಟ್ಜಿಯಾಡಿ ಮತ್ತು ನುಗ್ರೋಹೊ ವಿರುದ್ಧ 7-6(4), 6-0ರ ಜಯ ಗಳಿಸಿತು. ಹೀಗಾಗಿ ಭಾರತ ತಂಡ ಚೊಚ್ಚಲ ಬಾರಿಗೆ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಏಪ್ರಿಲ್ ನಲ್ಲಿ ನಡೆಯುವ ಮುಂದಿನ ಪಂದ್ಯದಲ್ಲಿ ಭಾರತ ಒಂದೋ ಲಾಟ್ವಿಯಾ ವಿರುದ್ಧ ಅಥವಾ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಾಡಲಿದೆ.