
ವಿಶ್ವ ಟೆನ್ನಿಸ್‌ನ ಸ್ಟಾರ್ ಆಟಗಾರ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ 2022ರ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಸ್ಪೇನ್‌ನ ಈ ಆಟಗಾರ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿಸಿದ್ದಾರೆ. ಈ ಗೆಲುವು ರಾಫೆಲ್ ನಡಾಲ್ ಅವರ ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಕನಸು ಜೀವಂತವಾಗಿರಿಸಿದೆ. 35ರ ಹರೆಯದ ರಾಫೆಲ್ ನಡಾಲ್ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಅಂತರದಿಂದ ಮಣಿಸಿದ್ದಾರೆ. ಈ ಸೆಮಿಫೈನಲ್ ಸೆಣೆಸಾಟ 2 ಗಂಟೆ 56 ನಿಮಿಷಗಳಲ್ಲಿ ಕಾಲ ನಡೆಯಿತು.
ಭಾನುವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಫೈನಲ್ ಮುಖಾಮುಖಿ ನಡೆಯಲಿದೆ. ಈ ಅಂತಿಮ ಸೆಣೆಸಾಟದಲ್ಲಿ ರಾಫೆಲ್ ನಡಾಲ್ ವಿಶ್ವ ದಾಖಲೆಯ ಟ್ರೋಫಿಗಾಗಿ 2ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮತ್ತು 4ನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಎದುರಿಸಲಿದ್ದಾರೆ.
ರಾಫೆಲ್ ನಡಾಲ್ ಸದ್ಯ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರೊಂದಿಗೆ 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದು ಸಮನಾಗಿದ್ದಾರೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಳಿದ ಫೆಡರರ್ ಹಾಗೂ ಜೊಕೊವಿಕ್ ಭಾಗವಾಗದ ಕಾರಣ ನಡಾಲ್ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಮೊದಲ ಆಟಗಾರನೆನಿಸುವ ಅವಕಾಶವನ್ನು ಹೊಂದಿದ್ದಾರೆ.
ಇನ್ನು ಈ ಮಹತ್ವದ ದಾಖಲೆಯ ಜೊತೆಗೆ ಮತ್ತೊಂದು ಪ್ರಮುಖ ಸಾಧನೆ ಮಾಡುವ ಅವಕಾಶವೂ ರಾಫೆಲ್ ನಡಾಲ್‌ಗೆ ಇದೆ. ಜೊಕೊವಿಕ್, ರಾಯ್ ಎಮರ್ಸನ್ ಮತ್ತು ರಾಡ್ ಲೇವರ್ ನಂತರ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಎನಿಸುವ ಅವಕಾಶವೂ ನಡಾಲ್‌ಗೆ ಇದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ನಡಾಲ್ 2009ರಲ್ಲಿ ಕೊನೇಯ ಬಾರಿ ಗೆದ್ದಿದ್ದರು.
ಈ ಸೆಮಿಫೈನಲ್ ಗೆಲುವಿನ ಬಳಿಕ ರಾಫೆಲ್ ನಡಾಲ್ ಭಾವುರಾಗಿದ್ದು ಕಂಡು ಬಂತು. ಪಂದ್ಯ ಮುಕ್ತಾಯವಾಗಿ ಸಂಭ್ರಮಿಸಿದ ಬಳಿಕ ತಮ್ಮ ಕಿಟ್ ಬ್ಯಾಗ್ ಬಳಿ ಬಂದ ರಾಫೆಲ್ ನಡಾಲ್ ಕಿಟ್ ಬ್ಯಾಗ್‌ಗೆ ಮುಖವನ್ನು ಒತ್ತು ತಮ್ಮ ಸಂತಸದ ಕಣ್ಣೀರನ್ನು ಮರೆಮಾಚುವ ಪ್ರಯತ್ನ ಮಾಡಿದರು.
ಈ ಗೆಲುವಿನ ಬಳಿಕ ಮಾತನಾಡಿದ ರಾಫೆಲ್ ನಡಾಲ್ "ನಾನು 2009 ರಲ್ಲಿ ಒಮ್ಮೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಅದೃಷ್ಟವನ್ನು ಹೊಂದಿದ್ದೆ. ಆದರೆ 2022ರಲ್ಲಿ ನಾನು ಮತ್ತೊಂದು ಅವಕಾಶ ನನಗಾಗಿ ಬರಬಹುದೆಂದು ಯೋಚಿಸಿರಲಿಲ್ಲ. ಇಂದಿನ ಈ ಗೆಲುವನ್ನು ಆನಂದಿಸುತ್ತೇನೆ ಹಾಗೂ ನಂತರ ನನ್ನ ಕೈಲಾದ ಪ್ರಯತ್ನವನ್ನು ನಡೆಸಲಿದ್ದೇನೆ" ಎಂದು ರಾಫೆಲ್ ನಡಾಲ್ ಪ್ರತಿಕ್ರಿಯಿಸಿದ್ದಾರೆ.