ಪ್ಯಾರಿಸ್, ಜೂನ್ 2: ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ, ಸ್ಪೇನ್ ನ ರಾಫೆಲ್ ನಡಾಲ್, ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ 4ನೇ ಸುತ್ತಿಗೆ ಕಾಲಿಟ್ಟಿದ್ದಾರೆ.
ಶುಕ್ರವಾರ ನಡೆದ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಜಾರ್ಜಿಯಾದ ನಿಕೋಲೊಜ್ ಬಾಸಿಲಾಶ್ವಿಲಿ ವಿರುದ್ಧ 6-0, 6-1, 6-0 ಸೆಟ್ ಗಳ ಅಂತರದಲ್ಲಿ ಜಯಶಾಲಿಯಾಗಿ 4ನೇ ಸುತ್ತಿಗೆ ಪದಾರ್ಪಣೆ ಮಾಡಿದರು.[ಥಾಯ್ಲೆಂಡ್ ಓಪನ್: ಸೆಮಿ ಫೈನಲ್ ಗೆ ಕಾಲಿಟ್ಟ ಸೈನಾ ನೆಹ್ವಾಲ್]

ಪಂದ್ಯದ ಆರಂಭದಿಂದಲೇ ಎದುರಾಳಿಯ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ನಡಾಲ್, ಆ ಸೆಟ್ ನಲ್ಲಿ 6-0 ಅಂತರದ ಜಯ ಸಾಧಿಸಿದರು.[ಫ್ರೆಂಚ್ ಓಪನ್: ಲಿಯಾಂಡರ್ ಜೋಡಿಗೆ ಸೋಲು]
ವಿಶ್ವದ ಈ ಅಗ್ರ ಆಟಗಾರನ ಎದುರು ಪರದಾಡಿದ ವಿಶ್ವದ 53ನೇ ಶ್ರೇಯಾಂಕಿತ ನಿಕೋಲೊಜ್, ದ್ವಿತೀಯ ಸೆಟ್ ನಲ್ಲಿ ಕೇವಲ ಒಂದು ಗೇಮ್ ಗೆದ್ದು ಒಂದು ಸಮಾಧಾನದ ನಿಟ್ಟುಸಿರು ಬಿಡುವಷ್ಟರಲ್ಲಿ ಅವರನ್ನು ಸೋಲಿನ ಸುಳಿಗೆ ಸಿಲುಕಿಸಿದರು ನಡಾಲ್.
ಇನ್ನು, ಮೂರನೇ ಸೆಟ್ ನ ಆಟದಲ್ಲೂ ಮೊದಲ ಸೆಟ್ ನ ಆಟವೇ ಪುನರಾವರ್ತನೆಯಾಯಿತು. ಆ ಸೆಟ್ ನಲ್ಲೂ ಭರ್ಜರಿ ಜಯ ಕಂಡ ನಡಾಲ್, ಈ ವಿಭಾಗದ ನಾಲ್ಕನೇ ಸುತ್ತಿಗೆ ದಾಪುಗಾಲಿಟ್ಟರು.