ವಿಂಬಲ್ಡನ್: ಪ್ರಶಸ್ತಿಗಾಗಿ ಸಿಮೊನಾ ಹ್ಯಾಲೆಪ್ vs ಸೆರೆನಾ ವಿಲಿಯಮ್ಸ್ ಕದನ

ಲಂಡನ್, ಜುಲೈ 11: ಮಿಂಚಿನ ಪ್ರದರ್ಶನ ನೀಡಿದ 7ನೇ ಶ್ರೇಯಾಂಕಿತ ಆಟಗಾರ್ತಿ ಹಾಗು ವಿಶ್ವದ ಮಾಜಿ ನಂ.1 ರೊಮೇನಿಯಾದ ಸಿಮೋನಾ ಹ್ಯಾಲೆಪ್, ಇಲ್ಲಿ ನಡೆದ ವಿಂಬಲ್ಡನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದು ಪ್ರಶಸ್ತಿಗಾಗಿ ಅಮೆರಿಕದ ದಿಗ್ಗಜೆ ಸೆರೆನಾ ವಿಲಿಯಮ್ಸ್ ಎದುರು ಪೈಪೋಟಿ ನಡೆಸಲಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ಅಂಗಣದ ಸೆಂಟರ್ ಕೋರ್ಟ್‌ನಲ್ಲಿ ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸೆಮಿಫೈನಲ್‌ನಲ್ಲಿ ಅಬ್ಬರಿಸಿದ ಸಿಮೋನಾ 6-1, 6-3ರ ನೇರ ಸೆಟ್‌ಗಳಿಂದ ಯುಕ್ರೇನ್‌ನ ಆಟಗಾರ್ತಿ ಎಲಿನಾ ಸ್ವೀಟೊಲಿನಾ ಅವರನ್ನು ಬಗ್ಗುಬಡಿದರು.
2018ರ ಫ್ರೆಂಚ್ ಓಪನ್ ಚಾಂಪಿಯನ್ 27 ವರ್ಷದ ಆಟಗಾರ್ತಿ ಸಿಮೋನಾ, ಒಂದು ಗಂಟೆ 13 ನಿಮಿಷಗಳಲ್ಲಿ ಸ್ವೀಟೊಲಿನಾ ಅವರ ಸವಾಲನ್ನು ಮೆಟ್ಟಿನಿಲ್ಲುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಐದನೇ ಬಾರಿ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯೊಮದರ ಫೈನಲ್‌ಗೆ ದಾಪುಗಾಲಿಟ್ಟಿದ್ದಾರೆ. ಇದಕ್ಕೂ ಮುನ್ನ 2014ರಲ್ಲಿ ವಿಂಬಲ್ಡನ್‌ನ ಸೆಮಿಫೈನಲ್ ತಲುಪಿದ್ದು ಸಿಮೋನಾ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.
ಬಳಿಕ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ 11ನೇ ಶ್ರೇಯಾಂಕಿತೆ ಹಾಗೂ ವಿಶ್ವ ದಾಖಲೆಯ 23 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್, 6-1, 6-2ರ ನೇರ ಸೆಟ್‌ಗಳಿಂದ ಜೆಕ್ ಗಣರಾಜ್ಯದ ಅನುಭವಿ ಆಟಗಾರ್ತಿ ಬಾರ್ಬೊರಾ ಸ್ಟ್ರೇಕೊವಾ ಅವರನ್ನು ಸುಲಭವಾಗಿ ಹತ್ತಿಕ್ಕಿ ಫೈನಲ್ ತಲುಪಿದ್ದಾರೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೆರೆನಾ ತಮ್ಮ ವೃತ್ತಿ ಬದುಕಿನ 7ನೇ ವಿಂಬಲ್ಡನ್ ಕಿರೀಟ ಮುಡಿಗೇರಿಸುವುದನ್ನು ಎದುರು ನೋಡುತ್ತಿದ್ದಾರೆ.
ಸೆರೆನಾ ತಮ್ಮ ಚೊಚ್ಚಲ ತಾಯ್ತನದ ಬಳಿಕ ಈವರೆಗೆ ಒಂದು ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಗೆದ್ದಿಲ್ಲ. ಕಳೆದ ವರ್ಷ ಯು.ಎಸ್ ಓಪನ್ ಫೈನಲ್ ತಲುಪಿದ್ದರಾದರೂ ಪ್ರಶಸ್ತಿ ಸುತ್ತಿನಲ್ಲಿ ಯುವ ಪ್ರತಿಭೆ ನಯೋಮಿ ಒಸಾಕ ವಿರುದ್ಧ ಮುಗ್ಗರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications