
ಲಂಡನ್, ಜು. 6: ಮತ್ತೀಗ ವಿಂಬಲ್ಡನ್ ಚಾಂಪಿಯನ್ ಶಿಪ್ ನಡೆಯುತ್ತಿದೆ. ಬಲಾಡ್ಯ ರೋಜರ್ ಫೆಡರರ್ ಮತ್ತೆ ಪ್ರಶಸ್ತಿ ಗೆಲ್ಲುವತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ರೋಜರ್ ಫೆಡರರ್ ಮೊದಲ ವಿಂಬಲ್ಡನ್ ಗೆದ್ದಾಗ ಹೇಗಿದ್ದರು ಗೊತ್ತೇ? ಬನ್ನಿ ಫೆಡರರ್ ವಿಂಬಲ್ಡನ್ ಕ್ಷಣಗಳ ಹಿಂದಕ್ಕೊಮ್ಮೆ ಹೋಗಿ ಬರೋಣ..
ಫೆಡರರ್ ಪುರುಷರ ವಿಭಾಗದ ಸಿಂಗಲ್ಸ್ ಮೊದಲ ಪ್ರಶಸ್ತಿ ಜಯಿಸಿದ್ದು 2003ರಲ್ಲಿ. ಅಂದು ಆವೆಮಣ್ಣಿನ ಅಂಗಳದಲ್ಲಿ ವಿಶ್ವದ ಗಮನ ಸೆಳೆದಿದ್ದ ರೋಜರ್ ಇಲ್ಲೀವರೆಗೆ ಒಟ್ಟು 8 ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದಾರೆ. ವೃತ್ತಿ ಬದುಕಿನ ಉದ್ದಕ್ಕೂ ಏಳು-ಬೀಳುಗಳನ್ನು ಕಂಡಿರುವ ಈ ಸ್ವಿಸ್ ಆಟಗಾರ ಮತ್ತೆ ಈ ಬಾರಿಯ ವಿಂಬಲ್ಡನ್ ಗೆದ್ದುಕೊಳ್ಳುವ ಎಲ್ಲಾ ನಿರೀಕ್ಷೆ ಮೂಡಿಸಿದ್ದಾರೆ.
ಇತ್ತೀಚೆಗೆ ರಾಫೆಲ್ ನಡಾಲ್ ಅವರೂ ಕ್ಲೇ ಕೋರ್ಟ್ ನಲ್ಲಿ ಏಳು-ಬೀಳುಗಳನ್ನು ಕಂಡಿದ್ದರು. ನಂಬರ್ ಸ್ಥಾನದಲ್ಲಿದ್ದ ರೋಜರ್ ಅವರನ್ನು ಸರಿಗಟ್ಟಿದ್ದ ನಡಾಲ್ ನಂ. 1 ಸ್ಥಾನಕ್ಕೇರಿದ್ದರು. ನಡಾಲ್ ಎದುರು ಆಡಲು ಕೊಂಚ ಅಂಜಿಕೆ ಎಂದು ಫೆಡರರ್ ಇತ್ತೀಚೆಗೆ ಹೇಳಿಕೊಂಡಿದ್ದರಾದರೂ ಸುಮಾರು 10 ವರ್ಷಗಳ ಸಾಧನೆಗಳನ್ನು ಗಮನಿಸಿದರೆ ಪ್ರಬಲ ನಡಾಲ್, ಜೊಕೋವಿಕ್, ಮರ್ರೆ, ಫೆಡರರ್ ಅವರಲ್ಲಿ ಕೊಂಚ ಫೆಡರರೇ ಹೆಚ್ಚು ಎತ್ತರಕ್ಕೆ ನಿಲ್ಲುತ್ತಾರೆ.
ಫೆಡರರ್ ತನ್ನ ವಿಂಬಲ್ಡನ್ ದಂತಕಥೆ ಪೀಟ್ ಸಾಂಪ್ರಾಸ್ ಅವರನ್ನು 2001 ರಲ್ಲಿ ಕೊನೆಯ 16 ರಲ್ಲಿ ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಆದರೆ 12 ತಿಂಗಳುಗಳ ನಂತರ ಅವರು ಕ್ರೊಯೇಷಿಯಾದ ಅರ್ಹತಾ ಆಟಗಾರ ಮಾರಿಯೋ ಆಂಸಿಕ್ ನಿಂದ ಸೋಲನುಭವಿಸಿದರು.
2003ರ ಅಗ್ರ 16ನೇ ಶ್ರೇಯಾಂಕಿತರು
ಸುಮ್ಮನೊಮ್ಮೆ 2003ರ ಅಗ್ರ 16ನೇ ವಿಶ್ವ ಶ್ರೇಯಾಂಕಿತ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸೋಣ. ಆಗ ನಂ. 1 ಸ್ಥಾನದಲ್ಲಿ ಲೇಟನ್ ಹೆವಿಟ್ 2. ಆಂಡ್ರೆ ಅಗಾಸ್ಸಿ 3. ಜುವಾನ್ ಕಾರ್ಲೋಸ್ ಫೆರೆರೋ 4. ರೋಜರ್ ಫೆಡರರ್ 5. ಆಂಡಿ ರಾಡಿಕ್ 6. ಡೇವಿಡ್ ನಲ್ಬಂಡಿಯನ್ 7. ಗಿಲ್ಲೆರ್ಮೊ ಕೊರಿಯಾ 8. ಸ್ಜೆಂಗ್ ಸ್ಕಲ್ಕೆನ್ 9. ರೈನರ್ ಸ್ಕಟ್ಲರ್ 10. ಟಿಮ್ ಹೆನ್ಮನ್ 11. ಜಿರಿ ನೋವಾಕ್ 12. ಪ್ಯಾರಾಡೊರ್ನ್ ಶ್ರೀಚಾಫಾನ್ 13 ಸೆಬಾಸ್ಟಿಯನ್ ಗ್ರೋಸ್ಜೀನ್ 14. ಕ್ಸೇವಿಯರ್ ಮಲಿಸ್ಸೆ 15. ಅರ್ನಾಡ್ ಕ್ಲೆಮೆಂಟ್ 16. ಮಿಖೈಲ್ ಯೌಜ್ನಿ.
ಟೆನಿಸ್ ಕೋರ್ಟ್ ನಲ್ಲಿ ಹೆಚ್ಚು ಮಿಂಚಿದ ಆಟಗಾರರಲ್ಲಿ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಇಬ್ಬರೂ ಸರಿಸುಮಾರು ಒಂದೇ ತಲೆಮಾರಿನವರು. ಅದರಲ್ಲೂ ಫೆಡರರ್ ಅವರೇ ಕೊಂಚ (4 ವರ್ಷಗಳಿಗೆ) ಹಿರಿಯ ಆಟಗಾರ. ಸದ್ಯ ಪುರುಷರ ಟೆನಿಸ್ ವಿಶ್ವ ರ್ಯಾಂಕಿಂಗ್ ನಲ್ಲಿ ನಡಾಲ್ ಮೊದಲ ಸ್ಥಾನದಲ್ಲಿದ್ದರೆ, ಫೆಡರರ್ ಎರಡನೇ ಸ್ಥಾನದಲ್ಲಿದ್ದಾರೆ.
ಈ ಬಾರಿಯ ವಿಂಬಲ್ಡನ್ ನಲ್ಲಿ ಫೆಡರರ್ ಮತ್ತು ನಡಾಲ್ ಇಬ್ಬರೂ ದ್ವಿತೀಯ ಸುತ್ತಿನಲ್ಲಿ ಗೆದ್ದು ಮೂರನೇ ಸುತ್ತಿಗೆ ಮುನ್ನಡೆ ಸಾಧಿಸಿದ್ದಾರೆ. ಚಾಂಪಿಯನ್ ಶಿಪ್ ನಲ್ಲಿ ಇಬ್ಬರೂ ಬಲಾಡ್ಯರೇ ಆದರೂ ಹಾಲಿ ಚಾಂಪಿಯನ್ ಫೆಡರರ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.