
ಪ್ಯಾರೀಸ್, ಜೂ. 10: ಇಂದಿನ ಕುತೂಹಲಕಾರಿ ಫ್ರೆಂಚ್ ಓಪನ್ ಫೈನಲ್ ಪಂದ್ಯಾಟದಲ್ಲಿ ರಾಫೆಲ್ ನಡಾಲ್ ಮತ್ತು ಡೊಮಿನಿಕ್ ಥೀಮ್ ಮುಖಾಮುಖಿಯಾಗಲಿದ್ದಾರೆ. ಇಬ್ಬರೂ ಬಲಿಷ್ಟರೆ. ಆದರೆ ಇಂದಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರರಾಗಿ ನಡಾಲ್ ಅವರೇ ಕಾಣಿಸುತ್ತಾರೆ. ಇದಕ್ಕೆ ಒಂದಿಷ್ಟು ಕಾರಣಗಳಿವೆ.
ಕೊಂಚ ದಿನ ಹಿನ್ನಡೆ ಅನುಭವಿಸಿದ್ದ ಸ್ಪೇನ್ ನ ಅನುಭವಿ ಆಟಗಾರ ನಡಾಲ್ ಈ ಬಾರಿ ಮತ್ತೆ ಗೆಲುವಿನ ಲಯಕ್ಕೆ ಬಂದಿರುವುದು ಈ ರೋಲ್ಯಾಂಡ್ ಗ್ಯಾರೋಸ್ ಫೈನಲ್ ನಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾರೆ ಎನ್ನುವುದಕ್ಕೆ ಮೊದಲ ಕಾರಣ. ಉಳಿದೆಲ್ಲಾ ಆಟಗಾರರಿಗೆ ಹೋಲಿಸಿದರೆ ನಾಡಲ್ ಹೆಚ್ಚು ಅಪಾಯಕಾರಿ ಆಟಗಾರ. ಪ್ರಶಸ್ತಿ ಸುತ್ತಿನ ಪಂದ್ಯವನ್ನು ನಡಾಲ್ ಸುಲಭವಾಗಿ ಬಿಟ್ಟುಕೊಟ್ಟಿದ್ದಿಲ್ಲ.
ಪ್ರಸ್ತುತ ರ್ಯಾಂಕಿಂಗ್ ನಲ್ಲೂ ನಡಾಲ್ ವಿಶ್ವ ನಂ. 1 ಸ್ಥಾನದಲ್ಲಿದ್ದು, 8ನೇ ಶ್ರೇಯಾಂಕದಲ್ಲಿರುವ ಆಸ್ಟ್ರಿಯಾ ಆಟಗಾರ ಥೀಮ್ ಅವರನ್ನು ಹಿಮ್ಮೆಟ್ಟಿಸುವ ಯೋಜನೆಯಲ್ಲಿದ್ದಾರೆ. ಇವೆಲ್ಲದರ ಮಧ್ಯೆ ಈ ಪಂದ್ಯವನ್ನು ನಡಾಲ್ ಗೆದ್ದರೆ ಅವರಿಗೆ 11ನೇ ಫ್ರೆಂಚ್ ಓಪನ್ ಜಯಿಸಿದ ಹಿರಿಮೆ ದೊರೆಯಲಿದೆ. ಅದೇ ಥೀಮ್ ಗೆದ್ದರೆ, ಮೊದಲ ಫ್ರೆಂಚ್ ಓಪನ್ ಚಾಂಪಿಯನ್ ಸಂಭ್ರಮವನ್ನಾಚರಿಸಲಿದ್ದಾರೆ.
ವೃತ್ತಿ ಬದುಕಿನಲ್ಲಿ ಒಟ್ಟು 16 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿರುವ ನಡಾಲ್ ಈ ಪಂದ್ಯದ ಗೆಲುವಿನೊಂದಿಗೆ 17ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇಂದಿನ ಪಂದ್ಯ ಥೀಮ್ ಗೆದ್ದರೆ ಅವರಿಗೆ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಗರಿ ಲಭಿಸಲಿದೆ.
ಈವರೆಗೆ ಥೀಮ್ ವಿರುದ್ಧದ ಮುಖಾಮುಖಿಯಲ್ಲಿ 6/3ರ ಮುನ್ನಡೆಯಲ್ಲಿರುವ 'ಕ್ಲೇ ಕೋರ್ಟ್ ಕಿಂಗ್' ನಡಾಲ್ ಈ ಬಗ್ಗೆ ಪ್ರಿಕ್ರಿಯಿಸಿ, 'ಗೆಲ್ಲುವ ಅವಕಾಶ ಇರುವುದರಿಂದ ನಾನಿವತ್ತು ನನ್ನ ಅತ್ಯುತ್ತಮ ಆಟ ಆಡಬೇಕಿದೆ. ಶ್ರೇಷ್ಠ ಆಟಗಾರನೆದುರಿನ ಸವಾಲಿನ ಪಂದ್ಯವಿದು ಎನ್ನುವ ಅರಿವೂ ನನಗಿದೆ' ಎಂದಿದ್ದಾರೆ.
ಇಂದು ಸಂಜೆ 6.30ಕ್ಕೆ ಪ್ಯಾರೀಸ್ ನ ಫಿಲಿಪ್ ಚಾಟ್ರಿಯಾರ್ ಅಂಕಣದಲ್ಲಿ ಪಂದ್ಯ ಆರಂಭಗೊಳ್ಳಲಿದ್ದು, ಈ ಬಾರಿಯ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಜೇತರಿಗಾಗಿ ಕಾದು ನೋಡಬೇಕಿದೆ.