ಸಾನ್ ಫ್ರಾನ್ಸಿಸ್ಕೋ, : ನವೆಂಬರ್. 06 : ವಿಶ್ವ ಟೆನಿಸ್‌ನ ಮಹಿಳಾ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಎದುರು ಮಂಡಿಯೂರಿದ ಟೆನಿಸ್ ತಾರೆಗಳೇ ಇಲ್ಲ. ಇದೀಗ ಸೆರೆನಾ ಪೊಲೀಸ್ ಕೆಲಸವನ್ನು ಮಾಡಿದ್ದಾರೆ. ಕಳ್ಳನನ್ನು ವಿಶ್ವ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ವೇಗದಲ್ಲಿ ಬೆನ್ನಟ್ಟಿ ಹಿಡಿದು ನಿಜವಾದ ಮಹಿಳಾ 'ಹೀರೋ' ಆಗಿ ಹೊರಹೊಮ್ಮಿದ್ದಾರೆ.
ತಮ್ಮದೇ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಉಸೇನ್ ಬೋಲ್ಟ್ ವೇಗದಲ್ಲಿ ಬೆನ್ನಟ್ಟಿದ ಸೆರೆನಾ ಆತನನ್ನು ಹಿಡಿದು ಮೊಬೈಲ್ ವಾಪಸ್ ಕಿತ್ತುಕೊಂಡಿದ್ದಾರೆ. ಸೆರೆನಾ ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಘಟನೆಯ ಸಮಗ್ರ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ...[ಇತಿಹಾಸ ನಿರ್ಮಿಸಿದ ಸೆರೆನಾ ಅತ್ಯಂತ ಹಿರಿಯ ವಿಂಬಲ್ಡನ್ ಕ್ವೀನ್]

ಫೇಸ್ ಬುಕ್ ನಲ್ಲಿ ಸೆರೆನಾ ಬರೆದುಕೊಂಡಿರುವುದನ್ನು ಅವರ ಮಾತುಗಳಲ್ಲೇ ಕೇಳಿಕೊಂಡು ಬರೋಣ.. ನಿನ್ನೆ ರೆಸ್ಟೋರೆಂಟ್ ವೊಂದರಲ್ಲಿ ಊಟ ಮಾಡುತ್ತಿದ್ದಾಗ ವಿಚಿತ್ರ ಘಟನೆ ನಡೆಯಿತು. ನಾಲ್ಕು ವ್ಯಕ್ತಿಗಳು ಕೂರಬಹುದಾದ ಟೇಬಲ್‌ನಲ್ಲಿ 'ನಾವಿಬ್ಬರೇ' ಕುಳಿತು ಎಷ್ಟೋ ವರ್ಷಗಳಿಂದ ಪರಸ್ಪರ ನೋಡಿಯೇ ಇಲ್ಲವೆಂಬಂತೆ ಮಾತನಾಡುತ್ತಿದ್ದೆವು, ಹರಟೆ ಕೊಚ್ಚುತ್ತಿದ್ದೆವು. ನನ್ನ ಮೊಬೈಲ್ ಪಕ್ಕದ ಕುರ್ಚಿಯ ಮೇಲಿತ್ತು. ನಮ್ಮ ಮಾತುಕತೆ ಮುಂದುವರಿದಿತ್ತು.
ಆದರೆ ಒಬ್ಬಾತ ನನ್ನ ಕಡೆ, ನನ್ನ ಮೊಬೈಲ್ ಕಡೆ ದಿಟ್ಟಿಸಿ ನೋಡುತ್ತಿದ್ದ. ಅವನು ಗ್ರಾಹಕನೋ ಅಥವಾ ಬೇರೆ ಯಾವುದಾದರೂ ಕೆಲಸಕ್ಕೆ ಬಂದವನೋ ಎಂಬ ಅನುಮಾನ ಕಾಡುತ್ತಿದ್ದರೂ ಗಮನ ನಿಡುವಷ್ಟು ಸಮಯ ನನ್ನ ಬಳಿ ಇರಲಿಲ್ಲ.
ನನ್ನ ಗಮನ ಬೇರೆಡೆನ ಸರಿದಾಗ ಒಂದೇ ಕ್ಷಣದಲ್ಲಿ ಮೊಬೈಲ್ ಎತ್ತುಕೊಂಡು ವ್ಯಕ್ತಿ ಪರಾರಿಯಾದ. ನಾನು ಸಣ್ಣಗೆ ಕೂಗಿಕೊಂಡೆ, ಆದರೆ ಅರೇ ಕ್ಷಣದಲ್ಲಿ ಕುರ್ಚಿಯಿಂದ ನೆಗೆದಿದ್ದೆ. ನನಗೆ ಗೊತ್ತಿಲ್ಲದಂತೆಯೇ ಆತನನ್ನು ಅಟ್ಟಿಸಿಕೊಂಡು ಓಡಿದ್ದೆ, ಮಿಂಚಿನವೇಗದಲ್ಲಿ ಆತನನ್ನು ಹಿಡಿದೆ.

ಆದರೂ ನನ್ನ ತಾಳ್ಮೆ ಕಳೆದುಕೊಂಡಿರಲಿಲ್ಲ. ಗೊಂದಲದಿಂದ ನೀವು ನನ್ನ ಮೊಬೈಲ್ ತೆಗೆದುಕೊಂಡಿದ್ದಿರಿ ಎಂದು ಹೇಳಿದೆ. ಆತ ತಡಬಡಾಯಿಸುತ್ತಲೇ ಹೌದೌದು ಎಂದ. ಅಷ್ಟರಲ್ಲಿ ನನ್ನ ಮೊಬೈಲ್ ಸಹ ರಿಂಗ್ ಆಗಿತ್ತು. ಆತನಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಇರಲಿಲ್ಲ.
ನನ್ನನ್ನು ಸೂಪರ್ ಹೀರೋ ಅಂತ ಕರೆಯಬಹುದೇ?! ಶಕ್ತಿ, ತಾಳ್ಮೆ, ನಾಯಕತ್ವ ದೊಂದಿಗೆ ನಿಮ್ಮೊಳಗಿನ ಸೂಪರ್ ಹೀರೋನ ಮಾತಿಗೆ ಕಿವಿಗೊಟ್ಟರೆ ಎಂಥ ಸವಾಲನ್ನು ಸುಲಭವಾಗಿ ದಾಟಬಹುದು.[ದೇಹಸಿರಿ ಪ್ರದರ್ಶಿಸಿದ ಸೆರೆನಾ ವಿಲಿಯಮ್ಸ್]
ಇವು ಸೆರೆನಾ ಬರೆದುಕೊಂಡಿರುವ ಸಾಲುಗಳು. ಸಾಮಾಜಿಕ ತಾಣಗಳಲ್ಲೂ ಸಹ ಸೆರೆನಾ ಮೊಬೈಲ್ ಪ್ರಕರಣದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.