
ನ್ಯೂಯಾರ್ಕ್, ಸೆಪ್ಟೆಂಬರ್ 3: ಟೆನಿಸ್ ವಿಶ್ವಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್ ವೃತ್ತಿ ಜೀವನದಲ್ಲಿ ಒಟ್ಟು 18 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮಹಾನ್ ಸಾಧಕ. ಆದರೆ ಯೂಎಸ್ ಓಪನ್ ಟೆನಿಸ್ ಟೂರ್ನಿಯ ವೇಳೆ ರಫಾ ವಿಶೇಷ ನಡೆಯಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ವಿಡಿಯೋವನ್ನು ಆಗಸ್ಟ್ 31ರಂದು ಟ್ವಿಟರ್‌ನಲ್ಲಿ ಹಾಕಿಕೊಳ್ಳಲಾಗಿದೆ. ಅಂದು ಯೂಎಸ್ ಓಪನ್ 3ನೇ ಸುತ್ತಿನ ಸ್ಪರ್ಧೆಗಾಗಿ ರಾಫೆಲ್, ನ್ಯೂಯಾರ್ಕಿನ ಆರ್ಥರ್ ಆ್ಯಷ್ ಸ್ಟೇಡಿಯಂಗೆ ಬಂದಿದ್ದಾಗ ನಡಾಲ್ ನೋಡಲು ಅಭಿಮಾಣಿಗಳು ಗುಂಪು ಸೇರಿದ್ದರು. ಆ ಗುಂಪಿನಲ್ಲಿ ಒಂದು ಮಗು ಅಳುತ್ತಿತ್ತು.
ಅಳುತ್ತಿರುವ ಪುಟಾಣಿಯನ್ನು ನೋಡಿದ ನಡಾಲ್ ಆ ಕೂಡಲೇ ಮಗುವನ್ನು ಅಭಿಮಾನಿಗಳ ಗುಂಪಿನಿಂದ ಹೊರಗೆ ಎತ್ತಿ ತಂದವರೆ, ಮಗುವಿನ ಕೆನ್ನೆ ದಡವಿ, ಭುಜ ನೇವರಿಸಿ ಅದು ಅಳು ನಿಲ್ಲಿಸುವಂತೆ ಮಾಡಿದರು. ಮತ್ತೆ ಆ ಪುಟಾನಿಗೆ ಹ್ಯಾಟ್ ಮೂಲಕ ಆಟೋಗ್ರಾಫ್ ಕೂಡ ನೀಡಿದರು. ದೈತ್ಯ ಟೆನಿಸ್ ತಾರೆಯ ಈ ಸರಳ ನಡೆ ಅಪಾರ ಅಭಿಮಾನಿಗಳ ಮನ ಗೆದ್ದಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಆಗಸ್ಟ್ 31ರ ಆ ಪಂದ್ಯದಲ್ಲಿ ನಡಾಲ್, ಸೌತ್ ಕೊರಿಯಾ ಆಟಗಾರ ಚುಂಗ್ ಹಿಯಾನ್ ವಿರುದ್ಧ 6-3, 6-4, 6-2ರ ಜಯ ಗಳಿಸಿದ್ದರು. ಅನಂತರ ಮಂಗಳವಾರ (ಸೆಪ್ಟೆಂಬರ್ 3) ನಡೆದ 4ನೇ ಸುತ್ತಿನ ಪಂದ್ಯದಲ್ಲೂ ನಡಾಲ್ ಅವರು ಕ್ರೋಷಿಯಾ ಆಟಗಾರ ಮರಿಸನ್ ಸಿಲಿಕ್ ವಿರುದ್ಧ 6-3, 3-6, 6-1, 6-2ರ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.