
ಪಂದ್ಯದಲ್ಲಿ ಅತಿ ಹೆಚ್ಚು ಸ್ಕೋರ್ (263)
ಆರ್‌ಸಿಬಿ ತಂಡದ ಬಹುದೊಡ್ಡ ರೆಕಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಕೋರ್ ಕೂಡ ಒಂದಾಗಿದೆ. ಐಪಿಎಲ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 263 ರನ್ ಕಲೆಹಾಕಿದೆ. 2013ರಲ್ಲಿ ಬೆಂಗಳೂರಿನಲ್ಲೇ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್‌ಗೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಐದು ವಿಕೆಟ್ ನಷ್ಟಕ್ಕೆ 263ರನ್ ಕಲೆಹಾಕಿತು.
ಈ ಪಂದ್ಯದಲ್ಲಿ ಕ್ರಿಸ್‌ಗೇಲ್ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿರುವುದು ಇನ್ನೂ ಕೂಡ ಮುರಿಯದೇ ಉಳಿದಿರುವ ದಾಖಲೆ ಆಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪುಣೆ ವಿರುದ್ಧ 130ರನ್‌ಗಳ ಬೃಹತ್ ಗೆಲವು ಸಾಧಿಸಿತು. ಜೊತೆಗೆ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ತಂಡವಾಗಿ ಹೊರಹೊಮ್ಮಿತು.

ವೈಯಕ್ತಿಕ ಗರಿಷ್ಠ ಸ್ಕೋರ್ (175)
ಹೌದು ಆರ್‌ಸಿಬಿ ಪುಣೆ ವಾರಿಯರ್ಸ್ ವಿರುದ್ಧ ದಾಖಲೆಯ ಮೊತ್ತ ಕಲೆಹಾಕಿದ್ದರ ಜೊತೆಗೆ ಐಪಿಎಲ್‌ನಲ್ಲಿ ವೈಯಕ್ತಿಕ ಸ್ಕೋರ್ ದಾಖಲಿಸಿದ ಬ್ಯಾಟ್ಸಮನ್ ಆರ್‌ಸಿಬಿ ತಂಡದವರೇ ಆಗಿದ್ದಾರೆ.
ವಿಂಡೀಸ್ ದೈತ್ಯ ಕ್ರಿಸ್‌ಗೇಲ್ ಪುಣೆ ವಿರುದ್ಧ ಸಿಡಿಸಿದ ಅಜೇಯ 175ರನ್‌ಗಳು ಇದುವರೆಗೂ ಯಾರೂ ಮುರಿಯದ ದಾಖಲೆ ಆಗಿದೆ. 265.17ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಗೇಲ್ 13 ಬೌಂಡರಿ ಮತ್ತು ಬರೋಬ್ಬರಿ 17 ಬೃಹತ್ ಸಿಕ್ಸರ್‌ಗಳನ್ನು ಸಿಡಿಸಿ ಮಿಂಚು ಹರಿಸಿದ್ದರು.
ಇದು ಕೇವಲ ಐಪಿಎಲ್ ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗ್ರೇಟೆಸ್ಟ್ ಇನ್ನಿಂಗ್ಸ್ ಆಗಿಯೇ ಉಳಿದಿದೆ. ಪಂದ್ಯ ನಡೆದು 9 ವರ್ಷಗಳೇ ಕಳೆದರೂ ಇದರ ಹತ್ತಿರಕ್ಕೂ ಯಾವ ಆಟಗಾರನು ಸುಳಿಯಲು ಸಾಧ್ಯವಾಗಿಲ್ಲ.
ರೀಟೈನ್ ಮಾಡಿಕೊಂಡ ಈ ಆಟಗಾರನನ್ನು ಹರಾಜಿಗೆ ಬಿಡುಗಡೆಗೊಳಿಸಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ

ಅತಿ ಹೆಚ್ಚು ರನ್‌ಗಳ ಜೊತೆಯಾಟ (229)
ತಂಡದ ಸ್ಕೋರ್, ವೈಯಕ್ತಿಕ ಸ್ಕೋರ್ ಜೊತೆಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟವೂ ಕೂಡ ಆರ್‌ಸಿಬಿ ಹೆಸರಿನಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 200ರನ್‌ಗಳ ಜೊತೆಯಾಟವಾಡಿದ ಕೀರ್ತಿ ಎಬಿಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಗೆ ಸಲ್ಲುತ್ತದೆ.
2016ರ ಐಪಿಎಲ್ ಸೀಸನ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಜೊತೆಗೂಡಿ ವಿಶ್ವ ದಾಖಲೆಯ ಜೊತೆಯಾಟವಾಡಿದರು. ಬೆಂಗಳೂರಿನಲ್ಲಿ ನಡೆದ ಗುಜರಾತ್ ಲೈಯನ್ಸ್ ವಿರುದ್ಧದ ಪಂದ್ಯದಲ್ಲಿ ಎರಡನೇ ವಿಕೆಟ್‌ಗೆ 229ರನ್‌ಗಳ ಜೊತೆಯಾಟವಾಡಿದ ಇಬ್ಬರೂ ಆಟಗಾರರು ಶತಕ ಸಿಡಿಸಿ ಮಿಂಚಿದರು.
ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109ರನ್ ಸಿಡಿಸಿದ್ರೆ, ಎಬಿಡಿ ವಿಲಿಯರ್ಸ್ 52 ಎಸೆತಗಳಲ್ಲಿ 129ರನ್ ಕಲೆಹಾಕಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ದೊಡ್ಡ ಜೊತೆಯಾಟವಾಗಿದೆ.
ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುಜರಾತ್ 104ರನ್‌ಗೆ ಆಲೌಟ್ ಆಗಿದ್ದು, 144ರನ್‌ಗಳ ದಾಖಲೆಯ ಗೆಲುವು ಸಹ ಕಂಡಿತು.
ಐಪಿಎಲ್ 15ನೇ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ ದ್ವಿಶತಕ ಜೊತೆಯಾಟವಾಡಿದರು. 210ರನ್ ಕಲೆಹಾಕಿದ ಈ ಜೋಡಿ ಆರ್‌ಸಿಬಿ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.
IPL 2022: RCB ತಂಡದ ಬಗ್ಗೆ ಹೆಚ್ಚು ಟ್ವೀಟ್, ಆಟಗಾರರ ಪೈಕಿ ಕೊಹ್ಲಿಗೆ ಅಗ್ರಸ್ಥಾನ; ಪೂರ್ಣ ಪಟ್ಟಿ ನೋಡಿ

ಅತಿ ಹೆಚ್ಚು ಶತಕ ದಾಖಲಿಸಿರುವ ತಂಡ ಆರ್‌ಸಿಬಿ (15)
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ದಾಖಲಾಗಿರುವ ತಂಡ ಆರ್‌ಸಿಬಿಯೇ ಆಗಿದೆ. ಆರ್‌ಸಿಬಿ ತಂಡದ ಪರ ಇದುವರೆಗೂ 15 ಶತಕ ದಾಖಲಾಗಿದೆ. ಇದರಲ್ಲಿ ಕ್ರಿಸ್‌ಗೇಲ್ ಮತ್ತು ವಿರಾಟ್ ಕೊಹ್ಲಿಯೇ ತಲಾ ಐದು ಶತಕ ಸಿಡಿಸಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್ 2, ಹಾಗೂ ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ ತಲಾ ಒಂದು ಶತಕ ಸಿಡಿಸಿದ್ದಾರೆ.

ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ ಆರ್‌ಸಿಬಿ ಆಟಗಾರ (973)
ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2016 ರ ಸೀಸನ್‌ನಲ್ಲಿ ಅತ್ಯಮೋಘ ದಾಖಲೆಯನ್ನ ಸೃಷ್ಟಿಸಿದ್ದಾರೆ. ಸೀಸನ್‌ವೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ ಆಟಗಾರ ಎಂಬ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿದ್ದಾರೆ.
2016ರ ಸೀಸನ್‌ನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08ರ ಸರಾಸರಿ ಹಾಗೂ 152.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ನಾಲ್ಕು ಅಮೋಘ ಶತಕದ ಜೊತೆಗೆ 973ರನ್ ಕಲೆಹಾಕಿದರು.
ಕೊಹ್ಲಿ 4 ಶತಕದ ಜೊತೆಗೆ 7 ಅರ್ಧಶತಕಗಳನ್ನು ಸಹ ಕಲೆಹಾಕಿದರು. ಈ ಸೀಸನ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ 83 ಬೌಂಡರಿ ಮತ್ತು 38 ಸಿಕ್ಸರ್‌ಗಳು ಸಿಡಿದವು.
ಐಪಿಎಲ್ 15ನೇ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಓಪನರ್ ಜಾಸ್ ಬಟ್ಲರ್ ನಾಲ್ಕು ಶತಕ ಸಹಿತ ಕೊಹ್ಲಿ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿಸಿದ್ರು. ಆದ್ರೆ ಫೈನಲ್‌ನಲ್ಲಿ ಹೆಚ್ಚು ರನ್ ಕಲೆಹಾಕದ ಹಿನ್ನಲೆಯಲ್ಲಿ ಲ್ಲಿ 850 ರನ್ ಗಳಿಸಿದ ಎರಡನೇ ಆಟಗಾರರಾದರು ಜೊತೆಗೆ ಕೊಹ್ಲಿ ನಂತರದ ಸ್ಥಾನ ಪಡೆದಿದ್ದಾರೆ. ಬಟ್ಟರ್ 17 ಪಂದ್ಯಗಳಿಂದ 863 ರನ್ ಕಲೆಹಾಕಿದ್ದಾರೆ.

ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲು (17)
2013ರ ಸೀಸನ್‌ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಸಿಡಿಸಿದ್ದ ಆರ್‌ಸಿಬಿ ಓಪನರ್ ಕ್ರಿಸ್‌ಗೇಲ್ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸುವ ಮೂಲಕ ದಾಖಲೆಯ ಇನ್ನಿಂಗ್ಸ್ ಆಡಿದ್ದರು. 66 ಎಸೆತಗಳಲ್ಲಿ ಅಜೇಯ 175ರನ್ ಕಲೆಹಾಕಿದ್ದ ಗೇಲ್ 17 ಬಾರಿ ಚೆಂಡನ್ನು ಬೌಂಡರಿ ಲೈನ್‌ನಿಂದ ಆಚೆಗೆ ಕಳುಹಿಸಿದ್ರು. ಇದು ಐಪಿಎಲ್ ಇತಿಹಾಸದಲ್ಲಿ ಇನ್ನೂ ಮುರಿಯದ ದಾಖಲೆಯಾಗಿ ಉಳಿದಿದೆ.

ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನ ಆಡಿರುವ ಆಟಗಾರ(223)
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಪಿಎಲ್‌ನ 15 ಸೀನಸ್‌ಗಳಲ್ಲೂ ಒಂದೇ ಫ್ರಾಂಚೈಸಿಗೆ ಆಡಿರುವ ಏಕೈಕ ಆಟಗಾರನಾಗಿದ್ದಾರೆ. 2008ರ ಚೊಚ್ಚಲ ಐಪಿಎಲ್ ಸೀಸನ್‌ನಿಂದಲೂ ಕೊಹ್ಲಿ ವಿರಾಟ್ ಇಲ್ಲಿಯವರೆಗೆ 223 ಐಪಿಎಲ್ ಪಂದ್ಯಗಳನ್ನಾಡಿದ್ದು ಆರ್‌ಸಿಬಿ ಪರವೇ ಆಗಿರುವುದು ದಾಖಲೆಯಾಗಿದೆ.
ವಿರಾಟ್ ಕೊಹ್ಲಿ 14 ವರ್ಷಗಳ ಕಾಲ ಒಂದೇ ಐಪಿಎಲ್ ಫ್ರಾಂಚೈಸಿಗೆ ಆಡುತ್ತಿರುವುದು ನಿಜಕ್ಕೂ ಹೆಮ್ಮೆಯ ದಾಖಲೆಯಾಗಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಒಂದೇ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ಹೆಸರಿನಲ್ಲಿದೆ. ಧೋನಿ ಚೆನ್ನೈ ಪರ 204 ಪಂದ್ಯಗಳನ್ನಾಡಿದ್ದಾರೆ. ಆದ್ರೆ 2016, 2017ರಲ್ಲಿ ಸಿಎಸ್‌ಕೆ ತಂಡವು ಬ್ಯಾನ್ ಆಗದಿದ್ರೆ, ಬಹುಶಃ ಕೊಹ್ಲಿ ದಾಖಲೆಯನ್ನ ಧೋನಿ ಸರಿಗಟ್ಟುತ್ತಿದ್ದರು.
2022ರ ಸೀಸನ್‌ನಲ್ಲಿ ಆರ್‌ಸಿಬಿ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೋಲನ್ನ ಕಂಡಿದ್ದು, ಮತ್ತೊಮ್ಮೆ ನಿರಾಸೆಗೊಂಡಿದೆ. 2023ರ ಐಪಿಎಲ್ ಸೀಸನ್‌ನಲ್ಲಾದರೂ ಆರ್‌ಸಿಬಿಗೆ ಟ್ರೋಫಿ ದಕ್ಕಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.


Click it and Unblock the Notifications












