ಏಷ್ಯಾ ಕಪ್ 2018: ಶನಿವಾರದಿಂದ ಶುರು ಕ್ರಿಕೆಟ್ ಕದನ

ದುಬೈ, ಸೆಪ್ಟೆಂಬರ್ 14: ಸಾಕಷ್ಟು ಕುತೂಹಲ ಕೆರಳಿಸಿರುವ ಆರು ದೇಶಗಳ ಏಷ್ಯಾ ಕಪ್ ಟೂರ್ನಿಗೆ ಶನಿವಾರ (ಸೆ.14) ಇಲ್ಲಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಶಕ್ತಿ ಕುಂದಿದೆಯಾದರೂ, ರೋಹಿತ್ ಶರ್ಮಾ ನಾಯಕತ್ವಕ್ಕೆ ಹಾಗೂ ಇತರೆ ಆಟಗಾರರ ಸಾಮರ್ಥ್ಯಕ್ಕೆ ಇದು ಅಗ್ನಿ ಪರೀಕ್ಷೆಯಾಗಲಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸೆ.19ರಂದು ನಡೆಯಲಿರುವ ಪಂದ್ಯ ಈಗಲೇ ಭಾರಿ ರೋಚಕತೆ ಮೂಡಿಸಿದೆ.
ಲೀಗ್ ಪಂದ್ಯದ ಬಳಿಕ ಸೂಪರ್ ಫೋರ್ ಹಂತದಲ್ಲಿಯೂ ಭಾರತ-ಪಾಕಿಸ್ತಾನ ಪರಸ್ಪರ ಎದುರಾಗುವ ಸಾಧ್ಯತೆ ಇದೆ. ಜತೆಗೆ ಸೆಪ್ಟೆಂಬರ್ 28ರಂದು ನಡೆಯಲಿರುವ ಫೈನಲ್‌ನಲ್ಲಿ ಮತ್ತೆ ಉಭಯ ತಂಡಗಳು ಸೆಣಸಾಟಕ್ಕೆ ಎದುರಾದರೂ ಅಚ್ಚರಿಯಿಲ್ಲ.

ರೋಹಿತ್ ನಾಯಕತ್ವಕ್ಕೆ ಪರೀಕ್ಷೆ
ಕೊಹ್ಲಿ ಗೈರುಹಾಜರಿಯಲ್ಲಿ ಭಾರತ ಒತ್ತಡವನ್ನು ಹೇಗೆ ಎದುರಿಸಲಿದೆ ಎನ್ನುವುದನ್ನು ನೋಡುವ ಅವಕಾಶ ಇದಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾಗೆ ಮಾಜಿ ನಾಯಕ ಧೋನಿಯ ಸಲಹೆ ಮತ್ತು ಮಾರ್ಗದರ್ಶನ ಬಲ ನೀಡುವ ವಿಶ್ವಾಸವಿದೆ.
ಭಾರತವು ತನ್ನ ಮೊದಲ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಅದರ ಮರುದಿನವೇ ಬಹು ನಿರೀಕ್ಷಿತ ಸಾಂಪ್ರದಾಯಿಕ ಎದುರಾಳಿಗಳ ಕದನ ನಡೆಯಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ ಮಿಂಚಿದ್ದಾರೆ. ಆದರೆ, ಇದು ಗುಣಮಟ್ಟದ ತಂಡಗಳ ವಿರುದ್ಧ ನಾಯಕತ್ವದ ಕೌಶಲಕ್ಕೆ ಕೂಡ ಸವಾಲಾಗಿದೆ.
ಮಧ್ಯಮ ಕ್ರಮಾಂಕ ಭಾರತಕ್ಕೆ ತಲೆನೋವಾಗಿದ್ದು, ಮಹೇಂದ್ರ ಸಿಂಗ್ ಧೋನಿ ಅವರಿಗೆ ಸೂಕ್ತ ಬ್ಯಾಟಿಂಗ್ ಸ್ಥಾನವನ್ನು ಹುಡುಕಬೇಕಿದೆ.

ಪ್ರಬಲ ಪಾಕಿಸ್ತಾನ
ಶ್ರೀಲಂಕಾದಲ್ಲಿ ಡಿಸೆಂಬರ್‌ನಲ್ಲಿ ನಡೆದ ನಿದಹಾಸ್ ಸರಣಿಯಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು. ಆಗ ಶ್ರೀಲಂಕಾಕ್ಕಿಂತ ಬಾಂಗ್ಲಾದೇಶವೇ ಹೆಚ್ಚು ಪ್ರಬಲ ಎನಿಸಿಕೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮಿಗಿಲಾಗಿ ವಿಶ್ವದರ್ಜೆಯ ಬೌಲರ್ ಮೊಹಮದ್ ಆಮೀರ್, ಆರಂಭಿಕ ಫಖರ್ ಜಮಾನ್, ಬಾಬರ್ ಅಜಂ ಮತ್ತು ಹ್ಯಾರಿಸ್ ಸೊಹೈಲ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಒಳಗೊಂಡ ಪ್ರಬಲ ಪಾಕಿಸ್ತಾನವನ್ನು ಎದುರಿಸುವುದು ಸುಲಭವಲ್ಲ. ವಿದೇಶಿ ನೆಲಗಳಲ್ಲಿ ಪಾಕಿಸ್ತಾನ ಉತ್ತಮ ಸಾಧನೆ ಪ್ರದರ್ಶಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಪಾಕ್ ಸಮರ್ಥ ಆಟಗಾರರನ್ನು ಹೊಂದಿದೆ.
ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು

ಕಪ್ಪುಕುದುರೆ ಬಾಂಗ್ಲಾ
ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶದ ಸಾಧನೆ ಉತ್ತಮವಾಗಿದೆ. ಕಳೆದ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆದಿತ್ತು. ಅದರಲ್ಲಿ ಬಾಂಗ್ಲಾ ಫೈನಲ್‌ಗೇರಿತ್ತು.
2012ರಲ್ಲಿ ಏಕದಿನ ಮಾದರಿಯಲ್ಲಿಯೂ ಅದು ಫೈನಲ್ ಪ್ರವೇಶಿಸಿತ್ತು. ಮುಶ್ರಫೆ ಮೊರ್ತಾಜಾ ನೇತೃತ್ವದ ತಂಡವು ದುಬೈ ಮತ್ತು ಅಬುದಾಬಿ ಪಿಚ್‌ಗಳಿಗೆ ಹೊಂದಿಕೆಯಾಗುವ ಬೌಲಿಂಗ್ ಪಡೆಯನ್ನು ಹೊಂದಿದೆ. ಅನುಭವಿ ಆಟಗಾರರಾದ ತಮಿಮ್ ಇಕ್ಬಾಲ್, ಮಹಮದುಲ್ಲಾ, ಮುಷ್ಫಿಕುರ್ ರಹೀಮ್ ಮತ್ತು ಶಕೀಬ್ ಅಲ್ ಹಸನ್ ತಂಡದ ಬೆನ್ನೆಲುಬಾಗಿದ್ದಾರೆ. ಇತ್ತೀಚಿನ ಸರಣಿಗಳಲ್ಲಿ ಬಾಂಗ್ಲಾ ವೈಫಲ್ಯ ಅನುಭವಿಸಿದ್ದರೂ, ಅದು ಯಾವುದೇ ಕ್ಷಣದಲ್ಲಿ ಜಿಗಿಯಬಹುದಾದ ಕಪ್ಪು ಕುದುರೆ ಎನ್ನುವುದನ್ನು ಮರೆಯುವಂತಿಲ್ಲ.

ಶ್ರೀಲಂಕಾದಲ್ಲಿನ ಅಸ್ಥಿರತೆ
ಉತ್ತಮ ಆಟಗಾರರಿದ್ದೂ ಕಳೆದ 2 ವರ್ಷಗಳಲ್ಲಿ ಕ್ರಿಕೆಟ್‌ನ ಮೂರೂ ವಿಭಾಗಗಳಲ್ಲಿ ಸತತ ಹಿನ್ನಡೆ ಅನುಭವಿಸುತ್ತಿರುವ ತಂಡ ಶ್ರೀಲಂಕಾ. ಅದರಲ್ಲಿಯೂ ಭಾರತದ ವಿರುದ್ಧ ಶ್ರೀಲಂಕಾ ಈ ಅವಧಿಯಲ್ಲಿ ಸೋತಿದ್ದೇ ಹೆಚ್ಚು.
ಹಳೆಯ ಆಟಗಾರರ ನಿವೃತ್ತಿ ಬಳಿಕ ಹೊಸಬರನ್ನು ಬೆಳೆಸುವ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಜತೆಗೆ ಮಂಡಳಿಯ ಆಡಳಿತ, ವೇತನ ವಿವಾದಗಳು ತಂಡದ ಮೇಲೆ ಪರಿಣಾಮ ಬೀರಿದೆ. ಶ್ರೀಲಂಕಾ ಸ್ಥಿರ ಆಟದ ಕೊರತೆಯನ್ನು ಅನುಭವಿಸುತ್ತಿದೆ.
ಆದರೂ ಆಂಜೆಲೊ ಮ್ಯಾಥ್ಯೂಸ್, ಉಪುಲ್ ತರಂಗ, ತಿಸೆರಾ ಪೆರೇರಾ, ಲಸಿತ್ ಮಾಲಿಂಗಾ ಅವರ ಅನುಭವ ಹಾಗೂ ಅಕಿಲ ಧನಂಜಯ, ದಸುನ್ ಶನಕ ಮತ್ತು ಕಸುನ್ ರಜಿತಾ ಅವರಂತಹ ಯುವ ಆಟಗಾರರಿಂದ ಉತ್ತಮ ಆಟ ನಿರೀಕ್ಷಿಸಬಹುದು.
ಮೊದಲ ಏಷ್ಯಾ ಕಪ್‌ನ ಮೊದಲ ಪಂದ್ಯವನ್ನೇ ಗೆದ್ದು ಬೀಗಿತ್ತು ಭಾರತ

ಪ್ರತಿಭಾವಂತರ ತಂಡ
ಈಗಷ್ಟೇ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಅಫ್ಘಾನಿಸ್ತಾನ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಟಿ20ಯಲ್ಲಿ ಮಿಂಚಿರುವ ರಶೀದ್ ಖಾನ್, ಮೊಹಮದ್ ಶಹಜಾದ್ ಮುಂತಾದ ಆಟಗಾರರಿರುವ ತಂಡ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಲ್ಲದು.

ಹಾಂಕಾಂಗ್‌ಗೆ ಹೊಸ ಅನುಭವ
ಅರ್ಹತಾ ಟೂರ್ನಿಯಲ್ಲಿ ಸೆಣಸಿ ಉಳಿದ ಐದು ತಂಡಗಳೊಂದಿಗೆ ಆಡುವ ಅವಕಾಶ ಪಡೆದುಕೊಂಡಿರುವ ಹಾಂಕಾಂಗ್ ತಂಡಕ್ಕೆ ಈ ಟೂರ್ನಿ ಬಹುದೊಡ್ಡ ಅನುಭವ ನೀಡಲಿದೆ. ಭಾರತ ಮತ್ತು ಪಾಕಿಸ್ತಾನಗಳಂತಹ ಪ್ರಬಲ ತಂಡಗಳ ಜತೆ ಅದು ಆಡಲಿದೆ. ಭಾರತ ಮೂಲದ ಅನ್ಷುಮಾನ್ ರಾತ್ ನಾಯಕತ್ವದ ಹಾಂಕಾಂಗ್ ತಂಡದಲ್ಲಿ ಪೂರ್ಣ ಪ್ರಮಾಣದ ವೃತ್ತಿಪರ ಆಟಗಾರರಿಲ್ಲ. ಏಕದಿನದ ಮಾನ್ಯತೆ ಪಡೆದುಕೊಳ್ಳುವ ತವಕದಲ್ಲಿರುವ ಹಾಕಾಂಗ್, ಪೈಪೋಟಿಯುತ ಆಟ ಪ್ರದರ್ಶಿಸುವ ಭರವಸೆ ಹೊಂದಿದೆ.

ಮೊದಲ ಪಂದ್ಯ
ಬಾಂಗ್ಲಾದೇಶ vs ಶ್ರೀಲಂಕಾ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಸಮಯ: ಸಂಜೆ 5 ಗಂಟೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್, ಸ್ಟಾರ್ ಸ್ಪೋರ್ಟ್ಸ್ 2, ಹಾಟ್ ಸ್ಟಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications