ಏಷ್ಯಾ ಕಪ್ 2022: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೋಲಿಗೆ 5 ಪ್ರಮುಖ ಕಾರಣಗಳು

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತೆ ಮುಗ್ಗರಿಸಿದೆ. ಏಷ್ಯಾಕಪ್ ಸೂಪರ್ 4 ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧವೂ ಸೋಲುವ ಮೂಲಕ ಬಹುತೇಕ ಏಷ್ಯಾಕಪ್ ಟ್ರೋಫಿಯನ್ನ ಕೈ ಬಿಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಪಡೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು. ರೋಹಿತ್ ಶರ್ಮಾ 72, ಸೂರ್ಯಕುಮಾರ್ ಯಾದವ್ 34ರನ್ ಸಿಡಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಈ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಶ್ರೀಲಂಕಾ ಓಪನರ್‌ಗಳಿಬ್ಬರ ಅರ್ಧಶತಕದ ನೆರವಿನಿಂದ ಉತ್ತಮ ಆರಂಭ ಪಡೆದಿದ್ದಲ್ಲದೆ ಸುಲಭವಾಗಿ ಅಂತಿಮ ಗೆರೆಯನ್ನ ದಾಟಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ.
ಟಿ20 ವಿಶ್ವಕಪ್‌ಗೂ ಮುನ್ನ ಹಾಟ್ ಫೇವರಿಟ್ ಆಗಿದ್ದ ಟೀಂ ಇಂಡಿಯಾ ಹೀಗೆ ಸತತ ಎರಡನೇ ಪಂದ್ಯ ಸೋಲಿಗೆ ಐದು ಪ್ರಮುಖ ಕಾರಣಗಳೇನು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

1. ಟಾಸ್ ಸೋಲುವ ಮೂಲಕ ಹಿನ್ನಡೆ
ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆಲ್ಲದಿರುವುದು ಭಾರತದ ಸೋಲಿನ ಕಾರಣಗಳಲ್ಲಿ ಒಂದಾಗಿದೆ. ದುಬೈ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವುದು ಲಾಭದಾಯಕವಾಗಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು ಸೋತಿರುವುದೇ ಹೆಚ್ಚಿದೆ. ಇಬ್ಬನಿ ಅಂಶ ಪ್ರಮುಖ ಪಾತ್ರ ವಹಿಸುವುದರಿಂದ ಚೇಸಿಂಗ್ ಸುಲಭವಾಗಿದೆ. ಈ ಟೂರ್ನಿಯಲ್ಲಿ ಹಾಂಕಾಂಗ್ ಬಿಟ್ಟರೆ ಬೇರೆ ಎಲ್ಲಾ ತಂಡಗಳು ಚೇಸಿಂಗ್‌ನಲ್ಲಿ ಗೆದ್ದಿದೆ.
ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಒಟ್ಟು 18 ಪಂದ್ಯಗಳು ನಡೆದಿವೆ. 16 ಪಂದ್ಯಗಳನ್ನು ಮೊದಲು ಫೀಲ್ಡಿಂಗ್ ಮಾಡಿದ ತಂಡಗಳು ಗೆದ್ದಿವೆ. ಆದ್ರೆ ಉಳಿದ ಎರಡು ಪಂದ್ಯಗಳನ್ನು ಹಾಂಗ್ ಕಾಂಗ್ ಮತ್ತು ಐರ್ಲೆಂಡ್‌ನಂತಹ ಸಣ್ಣ ದೇಶಗಳು ಸೋತಿವೆ. ಪ್ರಸಕ್ತ ಟೂರ್ನಿಯಲ್ಲಿ ದುಬೈನಲ್ಲಿ 6 ಪಂದ್ಯಗಳು ನಡೆದಿದ್ದು, ಚೇಸಿಂಗ್ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಒಂದೇ ಒಂದು ಪಂದ್ಯವನ್ನು ಗೆದ್ದಿತು. ಅದೂ ಹಾಂಕಾಂಗ್ ವಿರುದ್ಧ. ಸೂಪರ್ 4ರಲ್ಲಿ ಭಾರತ ಸತತ ಎರಡು ಪಂದ್ಯಗಳಲ್ಲಿ ಟಾಸ್ ಸೋತು ಬೆಲೆ ತೆತ್ತಿದೆ.

2. ಫಿನಿಷಿಂಗ್ ಸರಿಯಾಗಿ ಮಾಡದೇ ಇರುವುದು
ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಸಾಧ್ಯವಾಗದೆ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 97 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಆದರೆ ನಂತರ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲೂ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ದೀಪಕ್ ಹೂಡಾ ವೈಫಲ್ಯದಿಂದಾಗಿ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಫಿನಿಶರ್ ದಿನೇಶ್ ಕಾರ್ತಿಕ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಈ ಪಂದ್ಯದಲ್ಲಿ ಕಾರ್ತಿಕ್ ಆಡಿದ್ದರೆ ಕೊನೆಯಲ್ಲಿ ಅಮೂಲ್ಯ ರನ್ ಗಳಿಸುತ್ತಿದ್ದರು.
ಏಷ್ಯಾ ಕಪ್: ಪಾಕಿಸ್ತಾನಕ್ಕೆ ಇಂದು ಅಫ್ಘಾನಿಸ್ತಾನ ಸವಾಲು: ಭಾರತಕ್ಕೂ ಈ ಪಂದ್ಯ ನಿರ್ಣಾಯಕ

3. ಬೌಲಿಂಗ್‌ನಲ್ಲೂ ವೈಫಲ್ಯ
174 ರನ್‌ಗಳ ಸಾಧಾರಣ ಗುರಿಯನ್ನು ರಕ್ಷಿಸಲು, ಆರಂಭಿಕ ವಿಕೆಟ್‌ಗಳು ಪ್ರಮುಖವಾಗಿವೆ. ಅದರಲ್ಲೂ ಪವರ್ ಪ್ಲೇನಲ್ಲಿ ವಿಕೆಟ್ ಕಬಳಿಸಬೇಕು. ಆದರೆ ಈ ನಿಟ್ಟಿನಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಸತತ ಬೌಲಿಂಗ್ ಮಾಡಿ ಪವರ್ ಪ್ಲೇನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಮಧ್ಯಮ ಓವರ್ ಗಳಲ್ಲಿ ವಿಕೆಟ್ ಕಬಳಿಸಿದರೂ ವೇಗಿಗಳಿಗೆ ಕನಿಷ್ಠ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಪಂದ್ಯವನ್ನು ಕೊನೆಯ ಓವರ್‌ಗೆ ತೆಗೆದುಕೊಂಡು ಹೋದರೂ, ರೋಹಿತ್ ನಿರ್ಣಾಯಕ 19 ನೇ ಓವರ್ ಅನ್ನು ಅರ್ಷದೀಪ್ ಬದಲಿಗೆ ಭುವನೇಶ್ವರ್‌ಗೆ ನೀಡುವ ಮೂಲಕ ದೊಡ್ಡ ತಪ್ಪು ಮಾಡಿದರು. ಆ ಓವರ್ ನಲ್ಲಿ ಭುವಿ ಕಡಿಮೆ ರನ್ ನೀಡಿದ್ರೆ ಅಥವಾ ಅರ್ಷದೀಪ್ ಆ ಓವರ್ ಬೌಲ್ ಮಾಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು.
ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿಗೆ ಅವಕಾಶ ನೀಡ್ತಿಲ್ಲ ಎಂದು ಕಿಡಿ ಕಾರಿದ ಹರ್ಭಜನ್ ಸಿಂಗ್, ರವಿಶಾಸ್ತ್ರಿ

4. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚದ ಪಾಂಡ್ಯ!
ಏಷ್ಯಾ ಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಲ್ ರೌಂಡ್ ಶೋ ಮೂಲಕ ಧೂಳೆಬ್ಬಿಸಿದ್ದ ಹಾರ್ದಿಕ್ ಪಾಂಡ್ಯ ನಂತರದ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ವಿಫಲರಾಗಿದ್ದರು. ಅದರಲ್ಲೂ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದರು. ಬ್ಯಾಟಿಂಗ್ ನಲ್ಲಿ 17 ರನ್ ಗಳಿಸಿದ್ದ ಹಾರ್ದಿಕ್ 4 ಓವರ್ ಬೌಲ್ ಮಾಡಿ ಒಂದೂ ವಿಕೆಟ್ ಪಡೆಯದೇ 35 ರನ್ ನೀಡಿದರು. ಹಾರ್ದಿಕ್ ಯಾವುದೇ ವಿಭಾಗದಲ್ಲಿ ಮಿಂಚಿದ್ರೆ ಟೀಂ ಇಂಡಿಯಾ ಬಯಸಿದ ಫಲಿತಾಂಶ ಸಿಗುತ್ತಿತ್ತು.

5. ಪ್ರಮುಖ ಹಂತದಲ್ಲಿ ರಿಷಭ್ ಪಂತ್ ಮತ್ತೆ ಕೈ ಕೊಟ್ಟಿದ್ದು!
ನಿರ್ಣಾಯಕ ಸಮಯದಲ್ಲಿ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ಮಾಡಿದ ಪ್ರಮಾದವು ಭಾರತದ ಅವಕಾಶಗಳನ್ನು ಹಾಳುಮಾಡಿತು. ಯುಜ್ವೇಂದ್ರ ಚಾಹಲ್ ಎಸೆದ 15ನೇ ಓವರ್‌ನಲ್ಲಿ ಮೆಂಡಿಸ್ ಮೊದಲ ಎಸೆತದಲ್ಲಿ ಔಟಾದರು, ಆದರೆ ದಸನ್ ಶನಕ ಎರಡನೇ ಎಸೆತದಲ್ಲಿ ಸ್ಟಂಪ್ ಆಗುವ ಅಪಾಯದಿಂದ ಪಾರಾದರು. ಪಂತ್ ಅವರನ್ನು ಸ್ಟಂಪ್ ಮಾಡಿದರೆ, ದಸನ್ ಶನಕ ಡಕ್ ಆಗಿ ಹಿಂದೆ ಸರಿಯುತ್ತಿದ್ದರು. ಆಗ ಟೀಂ ಇಂಡಿಯಾ ಗೆಲುವಿನ ಸಾಧ್ಯತೆ ಹೆಚ್ಚಿರುತ್ತಿತ್ತು. ಆ ಅವಕಾಶವನ್ನು ಪಡೆದ ಶನಕ 18 ಎಸೆತಗಳಲ್ಲಿ 33 ರನ್ ಗಳಿಸಿ ಭಾರತದ ಗೆಲುವಿನ ಅವಕಾಶವನ್ನು ಹಾಳು ಮಾಡಿದರು.
ಜೊತೆಗೆ ಬ್ಯಾಟಿಂಗ್‌ನಲ್ಲಿ ಮತ್ತೆ ಕೈ ಕೊಟ್ಟ ರಿಷಭ್ ಪಂತ್ 13 ಎಸೆತಗಳಲ್ಲಿ 17 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications