Asia Cup 2023: ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ!
ಸದ್ಯದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧದ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಹ್ವಾನ ಮೇರೆಗೆ ನೆರೆಯ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರೋಜರ್ ಬಿನ್ನಿ ಮತ್ತು ರಾಜಿವ್ ಶುಕ್ಲಾ ಇಬ್ಬರು ಬಿಸಿಸಿಐ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದಕ್ಕೂ ಮೊದಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಪಿಸಿಬಿ ಆಹ್ವಾನ ಕಳುಹಿಸಿದೆ ಎಂದು ವರದಿಯಾಗಿದ್ದವು. ಆದರೆ, ಜಯ್ ಶಾ ಪಾಕಿಸ್ತಾನಕ್ಕೆ ತೆರಳುವ ವಿಚಾರವನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಗಡಿ ಮತ್ತು ರಾಜಕೀಯ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಬಾಂಧವ್ಯ ದಶಕದಿಂದ ಸ್ಥಗಿತಗೊಂಡಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು 2012ರಿಂದ ಯಾವುದೇ ದ್ವಿಪಕ್ಷೀಯ ಪಂದ್ಯಾವಳಿಯನ್ನು ಆಡಿಲ್ಲ. ಭಾರತ ತಂಡ ಕೊನೆಯ ಬಾರಿಗೆ 2008ರಲ್ಲಿ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಬಿಸಿಸಿಐನ ಸದ್ಯದ ನಡೆಯು ಎರಡು ಕ್ರಿಕೆಟ್ ತಂಡಗಳು ಮತ್ತು ಮಂಡಳಿಗಳ ನಡುವಿನ ಪರಿಸ್ಥಿತಿಯನ್ನು ಸುಧಾರಿಸುವತ್ತ ಸಕಾರಾತ್ಮಕ ಕ್ರಮವೆಂದು ಪರಿಗಣಿಸಲಾಗಿದೆ.
2023ರ ಏಷ್ಯಾ ಕಪ್ ಆತಿಥೇಯ ರಾಷ್ಟ್ರವಾಗಿ ಆಯ್ಕೆಯಾದ ನಂತರ, ಬಿಸಿಸಿಐ ಈ ಹಿಂದೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಹಲವು ದಿನಗಳ ಚರ್ಚೆಗಳ ನಂತರ, ಪಾಕಿಸ್ತಾನವು ಶ್ರೀಲಂಕಾದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಲು ಒಪ್ಪಿಕೊಂಡಿತು.
ಆದರೆ, ಈ ಬಾರಿಯ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನವು ಕೇವಲ ನಾಲ್ಕು ಪಂದ್ಯಗಳನ್ನು ಆತಿಥ್ಯ ಪಡೆದಿದೆ ಮತ್ತು ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತನ್ನ ಏಷ್ಯಾ ಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮಾತ್ರ ಆಡಲಿದೆ.
"ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೆಲವು ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಪಿಸಿಬಿ ಬಿಸಿಸಿಐಗೆ ಆಹ್ವಾನ ನೀಡಿತ್ತು ಮತ್ತು ಎಸಿಸಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಬಿನ್ನಿ ಮತ್ತು ಶುಕ್ಲಾ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಅವರು ಸೆಪ್ಟೆಂಬರ್ 3ರಿಂದ 7ರವರೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಉಳಿಯಲಿದ್ದಾರೆ ಮತ್ತು ಮುಂದಿನ ತಿಂಗಳ 3ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಗುಂಪು ಹಂತದ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ತನ್ನ ಆರಂಭಿಕ ಪಂದ್ಯವನ್ನು ಸೆಪ್ಟೆಂಬರ್ 2ರಂದು ಪಾಕಿಸ್ತಾನದ ವಿರುದ್ಧ ಕ್ಯಾಂಡಿಯಲ್ಲಿ ಆಡಲಿದೆ. ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಆಗಸ್ಟ್ 30ರಂದು ಮುಲ್ತಾನ್‌ನಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಿವೆ.
ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳನ್ನು ಒಂದು ಗುಂಪಿನಲ್ಲಿ ಸೇರಿಸಲಾಗಿದೆ. ಟೂರ್ನಿಯ ಸೂಪರ್ 4 ಹಂತದಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಸಾಧ್ಯವಾದರೆ ಫೈನಲ್‌ನಲ್ಲಿ ಮತ್ತೆ ಸೆಣಸಾಡಲಿವೆ.
ಇನ್ನು ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications