'ಟೀ ಕಪ್ ಆದ ಏಷ್ಯಾಕಪ್'; ಆತಿಥ್ಯ ವಿವಾದಕ್ಕೆ ಕಿಡಿಹೊತ್ತಿಸಿದ ಪಾಕ್ ಮಾಜಿ ನಾಯಕ

2023ರ ಏಕದಿನ ಏಷ್ಯಾ ಕಪ್ ಪಂದ್ಯಾವಳಿ ಆತಿಥ್ಯ ವಿಚಾರವಾಗಿ ಹುಟ್ಟಿಕೊಂಡಿರುವ ವಿವಾದವು ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಕಳೆದ ಅಕ್ಟೋಬರ್‌ನಲ್ಲಿ ಏಷ್ಯಾಕಪ್‌ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದರು ಮತ್ತು ಆ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದಾರೆ.
WPL2023: ಚೊಚ್ಚಲ ಮಹಿಳಾ ಐಪಿಎಲ್ ಆರಂಭದ ದಿನಾಂಕ, ಸ್ಥಳ ಖಚಿತಪಡಿಸಿದ ಅರುಣ್ ಧುಮಾಲ್
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಏಷ್ಯಾ ಕಪ್ ಪಂದ್ಯಾವಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಬಿಟ್ಟುಕೊಡದಿರಲು ಪಟ್ಟು ಹಿಡಿದು ಕುಳಿತಿದೆ ಮತ್ತು ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ಬರದಿದ್ದರೆ, ಪಾಕಿಸ್ತಾನ ತಂಡವು ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂಬ ಬೆದರಿಕೆ ಒಡ್ಡಿದೆ.
ಈ ಏಷ್ಯಾ ಕಪ್ ಆತಿಥ್ಯ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ, ಫೆಬ್ರವರಿ 4ರಂದು ಬಹ್ರೇನ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆ ನಡೆಸಿದರೂ, ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ, ಮಾರ್ಚ್‌ನಲ್ಲಿ ಮತ್ತೆ ಸಭೆ ಸೇರಲು ತೀರ್ಮಾನಿಸಿದೆ.

ಹಲವು ಕ್ರಿಕೆಟ್ ತಜ್ಞರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ 'ಭಾರತ ನರಕಕ್ಕೆ ಹೋಗಲಿ, ಐಸಿಸಿ ಅವರನ್ನು ಹೊರಹಾಕಲಿ' ಎಂದೆಲ್ಲಾ ಮಾತನಾಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಅವರು ಎಸಿಸಿ ವಿರುದ್ಧ ತುಸು ಹೆಚ್ಚಾಗಿ ಆಕ್ರೋಶಗೊಂಡಂತೆ ಕಾಣುತ್ತಿದ್ದು, ಏಷ್ಯಾ ಕಪ್ ಅನ್ನು 'ಕಪ್ ಆಫ್ ಟೀ' ಎಂದು ಜರೆದಿದ್ದಾರೆ.
"ಏಷ್ಯಾ ಕಪ್ ಇದೀಗ ಎಲ್ಲರಿಗೂ ನೀಡುವ ಒಂದು ಟೀ ಕಪ್ ಆಗಿ ಮಾರ್ಪಟ್ಟಿದೆ. ಆತಿಥ್ಯಕ್ಕಾಗಿ ನಾವು ಮಾರ್ಚ್‌ವರೆಗೆ ಕಾಯಬೇಕಾಗಿದೆ. ಆದರೆ ಇದು ಎಲ್ಲರ ನಿಯಂತ್ರಣಕ್ಕೆ ಮೀರಿದ ಸಂಗತಿಯಾಗಿದೆ. ಎಲ್ಲವೂ ಶೀಘ್ರದಲ್ಲೇ ಸುಧಾರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಏಷ್ಯಾ ಕಪ್ ಆತಿಥ್ಯ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕಿದೆ," ಎಂದು ಸಲ್ಮಾನ್ ಬಟ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ವರದಿಗಳ ಪ್ರಕಾರ, ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ಭಾರತ ತಂಡವನ್ನು ಪಾಕಿಸ್ತಾನದಲ್ಲಿ ಏಷ್ಯಾಕಪ್ ಟೂರ್ನಿ ಆಡಲು ಕಳುಹಿಸದಿದ್ದರೆ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತನ್ನ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಎಚ್ಚರಿಕೆ ನೀಡಿದ್ದಾರೆ.

2023ರ ಏಕದಿನ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಯುಎಇಗೆ ಸ್ಥಳಾಂತರಿಸುವ ನಿರೀಕ್ಷೆಯಿದ್ದು, ಮಾರ್ಚ್‌ನಲ್ಲಿ ಪರ್ಯಾಯ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications